ಸರ್ಕಾರಿ ಉದ್ಯೋಗಿಗಳಿಗೆ ರಕ್ಷಣೆ ನೀಡಬೇಕು: ಭಟ್ಕಳ ನೌಕರರ ಸಂಘದ ಒತ್ತಾಯ - ಬಂಗಾರಪೇಟೆ ತಾಲೂಕು ತಹಶೀಲ್ದಾರ್ ಜಿ.ಕೆ. ಚಂದ್ರಮೌಳೇಶ್ವರ ಹತ್ಯೆ
ಸರ್ಕಾರಿ ನೌಕರರಿಗೆ ಅಗತ್ಯ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳ ಶಾಖೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಭಟ್ಕಳ: ಬಂಗಾರಪೇಟೆ ತಾಲೂಕು ತಹಶೀಲ್ದಾರ್ ಆಗಿದ್ದ ಜಿ.ಕೆ. ಚಂದ್ರಮೌಳೇಶ್ವರ ಹತ್ಯೆ ಹಿನ್ನೆಲೆಯಲ್ಲಿ ಕಠಿಣ ಕಾನೂನು ರೂಪಿಸಿ ಸರ್ಕಾರಿ ನೌಕರರಿಗೆ ಅಗತ್ಯ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಭಟ್ಕಳ ಶಾಖೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಜುಲೈ 9 ರಂದು ಕೋಲಾರ ಜಿಲ್ಲೆ, ಬಂಗಾರಪೇಟೆ ತಾಲೂಕು ತಹಶೀಲ್ದಾರ್ ಬಿ.ಕೆ.ಚಂದ್ರಮೌಳೇಶ್ವರ ಅವರನ್ನ ಹತ್ಯೆ ಮಾಡಲಾಗಿತ್ತು. ಶಾಮಸಮುದ್ರ ಹೋಬಳಿ, ತೊಪ್ಪನಹಳ್ಳಿ ಗ್ರಾಮದ ರಾಮಮೂರ್ತಿ ಹಾಗೂ ವೆಂಕಟಪತಿ ಎಂಬುವವರ ಜಮೀನಿನ ವ್ಯಾಜ್ಯದ ಸಂಬಂಧ ಪೊಲೀಸ್ ರಕ್ಷಣೆಯಲ್ಲಿ ಜಂಟಿ ಸರ್ವೆಯಲ್ಲಿ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಆರೋಪಿ ವೆಂಕಟಪತಿ, ಪೊಲೀಸರ ಸಮ್ಮುಖದಲ್ಲಿಯೇ ಏಕಾಏಕಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ.
ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ಘಟನೆಗಳು ಆಗಾಗ ಸಂಭವಿಸುತ್ತಿರುತ್ತವೆ. ಅದರಲ್ಲೂ ಕ್ಷೇತ್ರ ಇಲಾಖೆಗಳಾದ ಕಂದಾಯ, ಭೂಮಾಪನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮೇಲೆ ಇಂತಹ ಹಲ್ಲೆ ಹಾಗೂ ದೌರ್ಜನ್ಯಗಳು ನಡೆಯುತ್ತಲೇ ಇದೆ ಎಂದು ಆರೋಪಿಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಮೃತರ ಕುಟುಂಬಕ್ಕೆ ಸರ್ಕಾರದಿಂದ ಗರಿಷ್ಠ ಮಟ್ಟದ ಪರಿಹಾರ, ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ನೇಮಕ, ಸರ್ಕಾರದಿಂದ ದೊರೆಯುವ ಎಲ್ಲ ಆರ್ಥಿಕ ಸೌಲಭ್ಯಗಳನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಭಟ್ಕಳ ತಹಶೀಲ್ದಾರ್ ಎಸ್. ರವಿಚಂದ್ರ, ಇಂತಹ ಕೃತ್ಯ ಅಮಾನವೀಯವಾದದ್ದು, ಈ ಬಗ್ಗೆ ಮನವಿಯನ್ನು ಸರ್ಕಾರಕ್ಕೆ ತಲುಪಿಸುವ ಕಾರ್ಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘ ಭಟ್ಕಳ ತಾಲೂಕು ಶಾಖೆಯ ಅಧ್ಯಕ್ಷ ಅನಂತ ಭಟ್ಕಳ, ರಾಜ್ಯ ಪರಿಷತ್ ಸದಸ್ಯ ಪ್ರಕಾಶ ಶಿರಾಲಿ, ತಾಲೂಕು ಸಂಘದ ಉಪಾಧ್ಯಕ್ಷ ಸುಧೀರ್ ಗಾವಂಕರ್, ಪ್ರಧಾನ ಕಾರ್ಯದರ್ಶಿ ಮೋಹನ ನಾಯಕ್ ಸೇರಿದಂತೆ ಸದಸ್ಯರಾದ ಪ್ರವೀಣ, ಸುನೀಲ್, ವಿನೋದ ನಾಯ್ಕ, ಅಶೋಕ ನಾಯ್ಕ ಮುಂತಾದ ನೌಕರರು ಹಾಜರಿದ್ದರು.