ಕಾರವಾರ: 18ನೇ ತಾರೀಖಿನವರೆಗೆ ಮಂಡ್ಯದಲ್ಲಿ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡುವವರು ಅಲ್ಲಿ ಚುನಾವಣೆ ಮುಗಿದ ಬಳಿಕ ಉತ್ತರ ಕನ್ನಡ ಜಿಲ್ಲೆಗೆ ಬಂದು ಆನಂದ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡುತ್ತಾರೆ ಎಂದು ಅನಂತಕುಮಾರ್ ಹೆಗಡೆ ವ್ಯಂಗ್ಯವಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ನಿನ್ನೆ ನಡೆದ ಪ್ರಚಾರ ಸಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ರೇವಣ್ಣರ ಹೆಸರು ಹೇಳದೆ ಕುಂಬಳಕಾಯಿ, ನಿಂಬೆಹಣ್ಣಿಗೆ ಹೋಲಿಸಿದ ಅವರು, 18ನೇ ತಾರೀಖಿನವರೆಗೆ ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಮಂಡ್ಯದಲ್ಲಿ ಹುಡುಕುತ್ತಾರೆ. 18ನೇ ತಾರೀಖಿನ ನಂತರ ಚುನಾವಣೆ ಮುಗಿಯಲ್ಲಿದ್ದು, ಅಲ್ಲಿಂದ ನಿಂಬೆಹಣ್ಣು, ಕುಂಬಳಕಾಯಿ, ಕುಂಕಮ ಕಾರವಾರಕ್ಕೆ ಬರಲಿದೆ. ಇಲ್ಲಿಗೆ ಬಂದು ಆನಂದ್ ಎಲ್ಲಿದ್ದೀಯಪ್ಪಾ ಎಂದು ಹುಡುಕಾಡಬೇಕಾಗುತ್ತೆ ಎಂದು ಗೇಲಿ ಮಾಡಿದರು.
ಜಿಲ್ಲೆಯ ಜನರು ತುಂಬಾ ಬುದ್ಧಿವಂತರಿದ್ದಾರೆ. ಗಣಪತಿ ಹಾಗೂ ಈಶ್ವರ ದೇವಸ್ಥಾನದಲ್ಲಿ ಏನು ಪೂಜೆ ಮಾಡಬೇಕು. ಜಟಕ ದೇವರಿಗೆ ಯಾವ ರೀತಿ ಪೂಜೆ ಮಾಡಬೇಕು ಚೆನ್ನಾಗಿ ಗೊತ್ತಿದೆ. ಜಟಕ ದೇವಸ್ಥಾನದಲ್ಲಿ ಕೋಳಿ ಕಡಿತಾರೆ, ಗಣಪತಿ ದೇವಸ್ಥಾನದಲ್ಲಿ ಕಡಿಯುವುದಿಲ್ಲ. ಖಂಡಿತವಾಗಿಯೂ ಏಪ್ರಿಲ್ 23ರಂದು ದೊಡ್ಡ ಬಂಡಿ ಹಬ್ಬ ಮಾಡುತ್ತೀರಾ ಎಂಬ ವಿಶ್ವಾಸ ಇದೆ ಎಂದು ಆನಂದ್ ಅಸ್ನೋಟಿಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.