ಶಿರಸಿ: ಶಿರಸಿಯ ಅರಣ್ಯ ಇಲಾಖೆ ಮೇಲೆ ಮನೆ ಧ್ವಂಸಗೊಳಿಸಿರುವ ಆರೋಪ ಕೇಳಿ ಬಂದಿದೆ. ತಾಲೂಕಿನ ಅಂದಳ್ಳಿಯಲ್ಲಿ ನಿರ್ಮಾಣ ಹಂತದ ಮನೆಯನ್ನು ಅರಣ್ಯ ಇಲಾಖೆಯವರು ದ್ವಂಸಗೊಳಿಸಿದ್ದಾರೆ ಎಂದು ಮನೆ ಮಾಲೀಕರು ಆರೋಪಿಸಿದ್ದಾರೆ.
ಶಿರಸಿಯ ಸದಾಶಿವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂದಳ್ಳಿಯ ಕಾಮಾಕ್ಷಿ ನಾಯ್ಕ ಎಂಬುವವರ ಮನೆಯನ್ನು ಶಿರಸಿ ಅರಣ್ಯ ವಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಜೆಸಿಬಿಯಿಂದ ಸಂಪೂರ್ಣ ಧ್ವಂಸಗೊಳಿಸುವ ಮೂಲಕ ದಬ್ಬಾಳಿಕೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
1957ಕ್ಕೂ ಪೂರ್ವದಲ್ಲಿನ ಅತಿಕ್ರಮಣ ಜಾಗ ಇದಾಗಿದ್ದು, ಕಳೆದ 10 ವರ್ಷದಿಂದ ಹಂತಹಂತವಾಗಿ ಮನೆ ನಿರ್ಮಾಣ ಮಾಡಿದ್ದು, 10 ಲಕ್ಷಕ್ಕೂ ಅಧಿಕ ಹಣ ವ್ಯಯಿಸಿ ಸ್ಲ್ಯಾಬ್ ಹಂತಕ್ಕೆ ಬಂದ ಮನೆಯನ್ನು ಕೆಡವಿದ್ದಾರೆ ಎಂದು ಮನೆಯವರು ತಿಳಿಸಿದ್ದಾರೆ.
ಇದರಲ್ಲಿ 4.17 ಎಕರೆ ಜಾಗದ ಜಿಪಿಎಸ್ ಆಗಿತ್ತು. ಅರಣ್ಯ ಇಲಾಖೆಯವರು ಸದ್ಯ ಯಥಾಸ್ಥಿತಿ ಕಾಯ್ದುಕೊಳ್ಳಿ ಎಂದು ಹೇಳಬಹುದಿತ್ತು. ಆದರೆ ಏಕಾಏಕಿ ಕೆಡವಿ ದೌರ್ಜನ್ಯ ನಡೆಸಿದ್ದಾರೆ. ಸಾಲ ಮಾಡಿ ನಿರ್ಮಿಸಿದ್ದ ಲಕ್ಷಾಂತರ ರೂ ನಷ್ಟವಾಗಿದೆ. ಆಗಿರುವ ನಷ್ಟ ಭರಿಸುವವರಾರು ಎಂದು ಮನೆ ಮಾಲೀಕರು ಕಣ್ಣೀರಿಟ್ಟಿದ್ದಾರೆ.
ಒಟ್ಟಾರೆಯಾಗಿ ಅರಣ್ಯ ಇಲಾಖೆಯವರು ತಾವು ತಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಹೇಳಿದ್ದಾರೆ. ಆದರೆ ಹತ್ತಾರು ವರ್ಷಗಳಿಂದ ಕಟ್ಟುತ್ತಿದ್ದಾಗ ಸುಮ್ಮನಿದ್ದವರು ಈಗ ಏಕಾಏಕಿ ಒಡೆದದ್ದು ಏಕೆ ಎಂದು ಮಾಲೀಕರು ಪ್ರಶ್ನಿಸಿದ್ದಾರೆ. ಈ ಹಿಂದೆಯೂ ತಾಲೂಕಿನಲ್ಲಿ ಈ ರೀತಿ ಮನೆ ಕೆಡವಿದ ಘಟನೆಗಳು ನಡೆದಿದ್ದು, ಇಲಾಖೆಯ ಈ ಅಮಾನವೀಯ ಕೃತ್ಯಕ್ಕೆ ಕ್ರಮ ಆಗಬೇಕು ಎನ್ನುವ ಆಗ್ರಹ ಕೇಳಿಬಂದಿದೆ.