ಕಾರವಾರ: ನಕಲಿ ಮತದಾನ ಆರೋಪ ಹಿನ್ನೆಲೆಯಲ್ಲಿ ಮತದಾನ ಮುಗಿದರೂ ಮತಗಟ್ಟೆಯಲ್ಲೇ ಚುನಾವಣಾ ಸಿಬ್ಬಂದಿಯನ್ನು ಗ್ರಾಮಸ್ಥರು ತಡೆಹಿಡಿದ ಘಟನೆ ಹೊನ್ನಾವರ ತಾಲೂಕಿನ ಸಂತೆಗುಳಿ ಗ್ರಾಮದ ಮತಗಟ್ಟೆ ಸಂಖ್ಯೆ 190ರಲ್ಲಿ ನಡೆದಿದೆ. ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಂತೆಗುಳಿ ಮತಗಟ್ಟೆಯಲ್ಲಿ ಮುರುಳಿಧರ್ ಹೆಗಡೆ ಎಂಬುವವರ ಸೀರಿಯಲ್ ನಂಬರ್ ಬಳಸಿ ಬೇರೊಬ್ಬ ವ್ಯಕ್ತಿ ಮತದಾನ ಮಾಡಿದ್ದು, ಸ್ವತಃ ಮುರುಳಿಧರ್ ಮತದಾನಕ್ಕೆ ಬಂದಾಗ ಈ ವಿಷಯ ತಿಳಿದುಬಂದಿದೆ.
ಇನ್ನು ಲೋಪದ ಅರಿವಾದ ಹಿನ್ನೆಲೆಯಲ್ಲಿ ಮತಗಟ್ಟೆಯ ಚುನಾವಣಾಧಿಕಾರಿಗಳು 17ಸಿ ಅಡಿಯಲ್ಲಿ ಟೆಂಡರ್ ವೋಟ್ ಮಾಡಲು ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ ಒಂದು ಮತವನ್ನು ಕಡಿತಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ವೇಳೆ ಪೊಲೀಸರು ಆಗಮಿಸಿ ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದಾರೆ.
ಮತದಾನ ಮಾಡಲು ಹೆಚ್ಚುವರಿ ಸಮಯಾವಕಾಶ ನೀಡಿದ ಅಧಿಕಾರಿಗಳು: ಇನ್ನು ಮತದಾನ ಸಮಯ ಮುಗಿದರು ಕೊನೆಗಳಿಗೆಯಲ್ಲಿ ಹೆಚ್ಚು ಮತದಾರರು ಆಗಮಿಸಿದ್ದ ಹಿನ್ನೆಲೆ ಹೆಚ್ಚುವರಿ ಸಮಯ ನೀಡಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟ ಘಟನೆ ಯಲ್ಲಾಪುರ ಕ್ಷೇತ್ರ ವ್ಯಾಪ್ತಿಯ ಶಿರಸಿ ತಾಲೂಕಿನ ಮಧುರವಳ್ಳಿ ಮತಗಟ್ಟೆ ಸಂಖ್ಯೆ 215 ರಲ್ಲಿ ನಡೆದಿದೆ. ಇಲ್ಲಿ ಕೊನೆ ಗಳಿಗೆಯಲ್ಲಿ ಬಂದ 40 ಜನ ಮತದಾರರಿಗೆ ಟೋಕನ್ ಕೊಟ್ಟು ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ. 6:30 ಆದರೂ ಮತದಾರರು ಹೆಚ್ಚಿದ್ದ ಕಾರಣ ಚುನಾವಣಾಧಿಕಾರಿಗಳಿಂದ ಹೆಚ್ಚುವರಿ ಸಮಯ ನೀಡಿ ಮತದಾನಕ್ಕೆ ಅವಕಾಶ ನೀಡಿದ್ದಾರೆ.
ಇದನ್ನೂ ಓದಿ:ಪ್ರಾಂತ್ಯವಾರು ಮತದಾನ: ಮೈಸೂರು ಭಾಗದಲ್ಲಿ ಅತ್ಯಧಿಕ, ಬೆಂಗಳೂರು ಪ್ರದೇಶ ಕೊನೆ