ಶಿರಸಿ: ಅತೃಪ್ತ ಶಾಸಕರ ರಾಜೀನಾಮೆ ಪರ್ವ ಮುಂದುವರೆದಿದೆ. ಬೆಂಗಳೂರಿನ ಪುಲಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಭಾನುವಾರ ಶಿರಸಿಗೆ ಆಗಮಿಸಿದ ಅವರು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಮತಗಳಿಂದ ಜಯ ಗಳಿಸಿದ್ದೆ. ಆದರೆ ಈ ಬಾರಿ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಇದರಿಂದ ತುಂಬಾ ನೋವಾಗಿದೆ ಎಂದರು.
ಮನನೊಂದು ರಾಜೀನಾಮೆ ಕೊಡುವ ನಿರ್ಧಾರಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಬಿಡುಗಡೆ ಮಾಡಿದ ಮೂರು ಅಭ್ಯರ್ಥಿಗಳ ಪಟ್ಟಿಯಲ್ಲಿ ನನ್ನ ಹೆಸರು ಘೋಷನೆ ಮಾಡಿಲ್ಲ. ನಮ್ಮಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲಾ ಒಂದಾಗಿ ಇದ್ದೇವೆ. ನನ್ನ ಕ್ಷೇತ್ರ ನಾನು ಹುಟ್ಟಿ ಬೆಳೆದಂತಹ ಸ್ಥಳ. ಯಾರದೋ ಮಾತು ಕೇಳಿ ನನಗೆ ಅನ್ಯಾಯ ಮಾಡಿದ್ದಾರೆ. ಪಕ್ಷಕ್ಕೆ ಇನ್ನೂ ರಾಜೀನಾಮೆ ಕೊಟ್ಟಿಲ್ಲ. ಕ್ಷೇತ್ರದ ಜನತೆ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಹಿರಿಯ ನಾಯಕರು ಕೆಲವರು ನನಗೆ ಟಿಕೆಟ್ ಕೊಡಬಾರದು ಎಂದು ರಾಜಕೀಯ ಮಾಡಿದ್ರು. ನನಗೆ ಅನ್ಯಾಯವಾಗಿದೆ. ಅವರಿಗೆ ದೇವರು ಒಳ್ಳೆಯದು ಮಾಡಲಿ. ಬೇರೆ ಪಕ್ಷದವರು ಯಾರೂ ನನ್ನನ್ನು ಸಂಪರ್ಕ ಮಾಡಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ ಜಗದೀಶ್ ಶೆಟ್ಟರ್