ಕಾರವಾರ : ಬಹು ಅಂಗಾಂಗ ವೈಪಲ್ಯದಿಂದ ಇಂದು ಮುಂಜಾನೆ ಮೃತಪಟ್ಟ ಗಾಯಕಿ ಲತಾ ಮಂಗೇಶ್ಕರ್ ಅವರ ನಿಧನಕ್ಕೆ ನಟಿ ತಾರಾ ಅನುರಾಧಾ ಸಂತಾಪ ಸೂಚಿಸಿದರು.
ನಗರದ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಗಾನಕೋಗಿಲೆಯನ್ನು ದೈಹಿಕವಾಗಿ ಕಳೆದುಕೊಂಡಿದ್ದೇವೆ. ಆ ತಾಯಿ ಕೇವಲ ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅವರು ಅನಾರೋಗ್ಯಕ್ಕೆ ಒಳಗಾಗಿ ತುಂಬಾ ದಿನಗಳಾಗಿತ್ತು. ಆದರೆ, ಇಂದು ಅವರನ್ನು ಕಳೆದುಕೊಂಡಿದ್ದು ಗಾಯನಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಇದು ತುಂಬಾ ನೋವಿನ ಸಂಗತಿ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.
ಕಾಲೇಜುಗಳಲ್ಲಿ ಹಿಜಾಬ್ ವಿವಾದ ವಿಚಾರದ ಕುರಿತು ಪ್ರತಿಕ್ರಿಯಿಸಿ, ವಿದ್ಯಾರ್ಥಿ ಜೀವನದಲ್ಲಿ ಸಮವಸ್ತ್ರವನ್ನು ಗೌರವಿಸುವುದು ಮೊದಲ ಆದ್ಯತೆಯಾಗಬೇಕು. ಶಾಲೆಯ ನೀತಿಗಳನ್ನು ಪಾಲಿಸಬೇಕಾಗಿರುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕರ್ತವ್ಯವಾಗಿದೆ. ಆದರೆ ಈ ರೀತಿಯಾಗಿ ವೈಭವೀಕರಣಗೊಳಿಸುತ್ತಿರುವ ಬೆಳವಣಿಗೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಅವರವರ ವೈಯಕ್ತಿಕ ವಿಚಾರಗಳನ್ನು ಅವರದೇ ಧರ್ಮದ ಶಾಲೆಗಳಿಗೆ ಸೇರಿ ಪಾಲಿಸಬೇಕು. ಆದರೆ ಮಕ್ಕಳ ಮನಸ್ಸಿನಲ್ಲಿ ವೈಮನಸ್ಸು ಮೂಡಿಸಬಾರದು. ಬೆಳೆಯವ ಮಕ್ಕಳನ್ನು ನಾವು ಶುದ್ಧವಾಗಿ ಬೆಳೆಸಬೇಕು. ಆಗ ಮಾತ್ರ ಅವರು ದೇಶದ ಜವಾಬ್ದಾರಿಯುತ ಪ್ರಜೆಗಳಾಗಲು ಸಾಧ್ಯವಿದೆ. ವಿದ್ಯಾರ್ಥಿಗಳು ಕೂಡ ವಿದ್ಯಾರ್ಹತೆಯನ್ನು ಪಡೆಯಲು ಶ್ರದ್ಧೆವಹಿಸಬೇಕು. ನಿಷ್ಠಾವಂತರಾಗಿ, ಭಕ್ತಿಯಿಂದ ವಿದ್ಯೆಯನ್ನು ಕಲಿಯುವಲ್ಲಿ ಮೊದಲು ಯೋಚಿಸಬೇಕು. ಬೇರೆ ವಿಚಾರಗಳು ನಂತರದ ಆದ್ಯತೆಯಾಗಬೇಕು ಎಂದರು.
ಇನ್ನು ವಿದ್ಯಾರ್ಥಿಗಳು ಮೈ ಮುಚ್ಚಿಕೊಳ್ಳುವಂತ ಬಟ್ಟೆಗಳನ್ನು ಹಾಕಿಕೊಳ್ಳುವುದು ಖಂಡಿತ ಸರಿ. ಇದೇ ಕಾರಣಕ್ಕೆ ಎಲ್ಲಾ ಶಾಲೆಗಳಲ್ಲಿ ಸಮವಸ್ತ್ರಗಳನ್ನು ಮಾಡಲಾಗಿದೆ. ಶಾಲೆಗೆ ಬಂದವರು ಅದನ್ನು ಪಾಲಿಸಲೇಬೇಕು. ಪಾಲಕರೂ ಅದನ್ನು ಗೌರವಿಸಬೇಕು ಎಂದರು.
ಇದನ್ನೂ ಓದಿ: ಮೌನವಾಯ್ತು ಹಾಡುಹಕ್ಕಿ: ಗಾನಕೋಗಿಲೆ ಲತಾ ಮಂಗೇಶ್ಕರ್ ಇನ್ನಿಲ್ಲ..!