ಶಿರಸಿ : ನಗರಸಭೆ ಪರವಾನಿಗೆ ಇಲ್ಲದೆ ವಾಹನದಲ್ಲಿ ನಗರದ ವಿವಿಧ ಕಡೆಗಳಲ್ಲಿ ಅನಧಿಕೃತವಾಗಿ ಮೀನು ಮಾರುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೀನು ಮಾರಾಟಗಾರ ಮಹಿಳೆಯರು ಶಿರಸಿ ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ನಗರಸಭೆಗೆ ಸಾವಿರಾರು ರೂ. ಕರ ತುಂಬಿ ಮೀನು ಮಾರುಕಟ್ಟೆಯಲ್ಲಿ ಕಟ್ಟೆ ಖರೀದಿಸಿ ಮೀನು ಮಾರುತ್ತಿದ್ದೇವೆ. ಇಲ್ಲಿರುವ ಎಲ್ಲ ಮೀನು ಮಾರಾಟಗಾರರ ಕುಟುಂಬ ಜೀವನ ಈ ವ್ಯಾಪಾರವನ್ನೇ ಅವಲಂಬಿಸಿದೆ. ಆದರೆ ನಗರಕ್ಕೆ ಹೊರ ಊರಿನಿಂದ ಆಗಮಿಸಿ ಎಲ್ಲೆಂದರಲ್ಲಿ ಮೀನು ಮಾರಾಟ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಕುಮಟಾ, ಅಂಕೋಲಾ ಭಾಗದಿಂದ ವಾಹನದ ಮೇಲೆ ಮೀನು ತಂದು ನಗರದಲ್ಲಿ ಕಡಿಮೆ ದರಕ್ಕೆ ಮೀನು ಮಾರಾಟ ಮಾಡುವ ಕಾರಣ ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ. ಯಾವುದೇ ಪರವಾನಗಿ ಪಡೆಯದೆ ಮೀನು ಮಾರಾಟ ಮಾಡುತ್ತಿದ್ದು, ಕರ ತುಂಬಿ ವ್ಯಾಪಾರ ಮಾಡುವ ನಮಗೆ ಅನ್ಯಾಯವಾಗುತ್ತಿದೆ. ತಕ್ಷಣ ಅಂತಹ ವ್ಯಾಪಾರಿಗಳಿಂದ ಆಗುತ್ತಿರುವ ಮೀನು ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದರು.
ಇದೇ ವೇಳೆ ಹೊರ ಊರಿನ ಮೀನು ವ್ಯಾಪಾರಿಯನ್ನು ಸ್ಥಳಕ್ಕೆ ಕರೆಸಿ, ಇನ್ನು ಮುಂದೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡದಂತೆ ಸಹಾಯಕ ಆಯುಕ್ತ ಉಳ್ಳಾಗಡ್ಡಿ ಅವರು ಸೂಚಿಸಿದ್ದು, ವ್ಯಾಪಾರ ಮಾಡುವುದಿದ್ದರೆ ನಗರಸಭೆ ಅನುಮತಿ ಪಡೆಯುವಂತೆ ಹೇಳಿದ್ದಾರೆ.