ಕಾರವಾರ: ಚಿರತೆ ಉಗುರು ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೊನ್ನಾವರ ಅರಣ್ಯ ಇಲಾಖೆ ಅಧಿಕಾರಿಗಳು 16 ಚಿರತೆ ಉಗುರು ಸಹಿತ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮುಗ್ವಾದ ಅಂತೋಣಿ ಮಿನಿನ್ ಫರ್ನಾಂಡಿಸ್ (48), ಬೆಳ್ಳಿಮಕ್ಕಿ ರೋಶನ್ ವಿಲ್ಲೆಂಟ್ ಲೊಬೋ(45), ಸಾಲ್ಕೋಡ್ ಮಹೇಶ ರಾಮ ನಾಯ್ಕ (36), ಹೊಸಗೋಡ ಗಣಪತಿ ನಾರಾಯಣ ಗೌಡ(29) ಬಂಧಿತ ಆರೋಪಿಗಳಾಗಿದ್ದಾರೆ. ಚಿರತೆ ಉಗುರು ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಪಡೆದ ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ವಿಶೇಷ ತಂಡ ರಚಿಸಿದ್ದರು. ಹೊನ್ನಾವರ ತಾಲೂಕಿನ ಮುಗ್ವಾ ಕ್ರಾಸ್ ಹಾಗೂ ಅರೇಅಂಗಡಿ ಸರ್ಕಲ್ ಬಳಿ ಸೋಮವಾರ ಕಾರ್ಯಾಚರಣೆ ನಡೆಸಿ ಚಿರತೆ ಉಗುರುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಮುಂದಾಗಿದ್ದವರ ಹೆಡೆಮುರಿ ಕಟ್ಟುವಲ್ಲಿ ಯಶ್ವಸಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ಉಗುರಿನ ಜೊತೆಗೆ 1 ಬೈಕ್ ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ವಲಯ ಅರಣ್ಯಧಿಕಾರಿಗಳಾದ ಶರತ್ ಶೆಟ್ಟಿ, ಶಿವಾನಂದ ಕೋಟ್ಯಾಳ, ಉಪ ವಲಯ ಅರಣ್ಯಾಧಿಕಾರಿ ರಾಜು ನಾಯ್ಕ, ತುಕಾರಾಂ, ಸುಬ್ರಹ್ಮಣ್ಯ ಗೌಡ, ಈಶ್ವರ ಗೌಡ, ಅರಣ್ಯ ರಕ್ಷಕರಾದ ಅಲ್ಲಾಮರ್ತುಜ ಬಾವಿಕಟ್ಟೆ, ಚಂದ್ರಪ್ಪ, ಯಲ್ಲಪ್ಪ ಪಾಲ್ಗೊಂಡಿದ್ದರು.