ಕಾರವಾರ (ಉತ್ತರ ಕನ್ನಡ): ಅಪರೂಪದಲ್ಲಿ ಅಪರೂಪವಾಗಿರುವ ಹಾರುವ ಬೆಕ್ಕು ಮರದಿಂದ ಮರಕ್ಕೆ ಜಿಗಿಯುವ ಸಂದರ್ಭದಲ್ಲಿ ವಿದ್ಯುತ್ ತಂತಿಗೆ ಸಿಲುಕಿ ಸಾವಿಗೀಡಾದ ಘಟನೆ ಶಿರಸಿ ನಗರದ ಟಿಎಸ್ಎಸ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಸುಮಾರು 10.15ಕ್ಕೆ ಘಟನೆ ನಡೆದಿದ್ದು, ಕೆಲಕಾಲ ವಿದ್ಯುತ್ ವ್ಯತ್ಯಯವೂ ಉಂಟಾಗಿತ್ತು. ಕಾಡಿನಲ್ಲಿ ವಾಸಿಸುವ ಈ ಬೆಕ್ಕು ಸಾಮಾನ್ಯವಾಗಿ ಮರದ ಪೊಟರೆಗಳಲ್ಲಿ ವಾಸ ಮಾಡುತ್ತದೆ. ಇನ್ನುಳಿದಂತೆ ಜಿಲ್ಲೆಯ ಇತರೆ ಸುದ್ದಿಗಳನ್ನು ನೋಡುವುದಾದರೆ,
ಶಿಕ್ಷಕಿಗೆ ಸಿಕ್ತು ಬಂಗಾರದ ಸರ: ಅಂಗನವಾಡಿ ಶಿಕ್ಷಕಿಯೊಬ್ಬರು ಶಾಲೆಗೆ ಹೋಗುವಾಗ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಸರ ಹಾಗೂ ಮೊಬೈಲ್ ಕಳೆದುಕೊಂಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸಿದ್ದಾಪುರ ಪೊಲೀಸರು ಸೊರಬಾ ಬಳಿ ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ.
ತಾಲೂಕಿನ ಕಾನಗೋಡಿನ ಪೂರ್ಣಿಮಾ ನಾಯ್ಕ ಎಂಬುವರು ಸೋಮವಾರ ಅವರಗುಪ್ಪಾ ಅಂಗನವಾಡಿಗೆ ತೆರಳುತ್ತಿದ್ದಾಗ ಬಳ್ಳಟ್ಟೆ ಹತ್ತಿರ ಬ್ಯಾಗ್‌ನಲ್ಲಿದ್ದ 7 ತೊಲೆ ಬಂಗಾರದ ಸರ ಹಾಗೂ ಮೊಬೈಲ್ ಕಳೆದುಕೊಂಡಿದ್ದರು. ಈ ಸಂಬಂಧ ಠಾಣೆಗೆ ದೂರು ನೀಡಿದ್ದರು. ದೂರು ಆಧರಿಸಿ
ಕೂಡಲೇ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಮೊಬೈಲ್ ಟ್ರ್ಯಾಕ್ ಮಾಡಿ ಸೊರಬಾಕ್ಕೆ ತೆರಳಿ ಕಳೆದುಕೊಂಡ ವಸ್ತುಗಳನ್ನು ತಂದು ಮರಳಿಸಿದ್ದಾರೆ. ಪಿಎಸ್ಐಗಳಾದ ಎಂ.ಜಿ ಕುಂಬಾರ, ಮಲ್ಲಿಕಾರ್ಜುನಯ್ಯ ಕೊರಾಣಿ, ಠಾಣೆಯ ರಮೇಶ ಕುಡಾಳ, ಉದಯ ಮೇಸ್ತಾ ಹಾಗೂ ಸಂಗೀತಾ ಕಾನಡೆ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.
ಹೊನ್ನಾವರದಲ್ಲಿ ಬ್ಯಾನರ್ ರಾಜಕೀಯ: ಹೊನ್ನಾವರ ತಾಲೂಕಿನ ಹೊಸಾಕುಳಿ ಗ್ರಾ.ಪಂ. ವ್ಯಾಪ್ತಿಯ ಅರೇಅಂಗಡಿಯ ಸರ್ಕಲ್ ಬಳಿ ಮಾಜಿ ಶಾಸಕಿ ಶಾರದಾ ಶೆಟ್ಟಿ ಬೆಂಬಲಿಗರು ಅಳವಡಿಸಿದ್ದ ಬ್ಯಾನರ್‌ಗೆ ಸಗಣಿ ಎರಚಿ ಕತ್ತರಿಸಿ ಹಾನಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಬೆಂಬಲಿಸಿ, ಮುಂದಿನ ದಿನದಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಈಗಾಗಲೇ ಘೋಷಣೆಯಾದ ಗ್ಯಾರಂಟಿ ಯೋಜನೆ ಜಾರಿಗೊಳಿಸುವ ಪ್ರಚಾರದ ಬ್ಯಾನರ್ ಇತ್ತೀಚೆಗೆ ಕಾರ್ಯಕರ್ತರು ಅಳವಡಿಸಿದ್ದರು.
ಭಾನುವಾರ ರಾತ್ರಿ ಕಿಡಿಗೇಡಿಗಳು ಬ್ಯಾನರ್ ಹರಿದು ಹಾಕಿದ್ದು, ಉದ್ದೇಶಪೂರ್ವಕವಾಗಿ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಮತ್ತು ಶಾರದಾ ಶೆಟ್ಟಿ ಭಾವಚಿತ್ರದ ಬಳಿ ಸಗಣಿ ಎರಚಿ ವಿರೂಪಗೊಳಿಸಿದ್ದಾರೆ. ಶಾಂತಿ ಕದಡುವ ಕೃತ್ಯ ಯಾರೂ ಮಾಡಬಾರದು. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ವಿನೋದ ನಾಯ್ಕ ತಿಳಿಸಿದ್ದಾರೆ.
ಇದನ್ನೂ ಓದಿ : ದೂರು ನೀಡಲು ಬಂದ ಮಹಿಳೆಯನ್ನೇ ಮಂಚಕ್ಕೆ ಕರೆದ್ರಾ ಇನ್‌ಸ್ಪೆಕ್ಟರ್? ಡಿಸಿಪಿಗೆ ತನಿಖಾ ವರದಿ ಸಲ್ಲಿಕೆ