ಕಾರವಾರ: ಕುಮಟಾ ತಾಲೂಕಿನ ಕಲ್ಲಬ್ಬೆ ಗ್ರಾಮ ಪಂಚಾಯತ್ ಕಟ್ಟಡದ ಸ್ಥಳಾಂತರ ಸಂಬಂಧ ನಡೆಯುತ್ತಿರುವ ವಾದ ವಿವಾದಗಳ ನಡುವೆಯೂ ಇದೀಗ ಸ್ಥಳೀಯರೋರ್ವರು ತಮ್ಮ ಮಾಲ್ಕಿ ಜಾಗವನ್ನು ಪಂಚಾಯತ್ ಕಟ್ಟಡಕ್ಕೆ ನೀಡಲು ಮುಂದಾಗಿದ್ದಾರೆ.
ತೀರಾ ಹಳೆಯದಾದ ಕಲ್ಲಬ್ಬೆ ಗ್ರಾಮ ಪಂಚಾಯತ್ ಕಾರ್ಯಾಲಯವನ್ನು ಉಗ್ಗನಮನೆ ಮಜಿರೆಗೆ ಸ್ಥಳಾಂತರಿಸುವ ಕುರಿತು ಈ ಹಿಂದೆ ಸಾಕಷ್ಟು ಚರ್ಚೆಗಳು ನಡೆದಿದ್ದವು. ಈ ಹಿನ್ನೆಲೆ ಪರ ಮತ್ತು ವಿರೋಧ ಎರಡೂ ತಂಡಗಳು ರೂಪುಗೊಂಡು ಪಂಚಾಯತ್ ರಾಜ್ ಎಂಜಿನಿಯರ್ ಅವರಿಗೂ ಮನವಿ ಸಲ್ಲಿಸಿದ್ದರು. ಈಗಿರುವ ಕಟ್ಟಡಕ್ಕಿಂತ ಉಗ್ಗನಮನೆ ಮಜಿರೆ ದೂರವಿದೆ ಎಂದು ನೂತನ ಕಟ್ಟಡದ ನಿರ್ಮಾಣ ಕಾರ್ಯವನ್ನು ಕಂದವಳ್ಳಿ, ಹೊಸಳ್ಳಿ ಹಾಗೂ ಹೊಸಾಡ ಭಾಗದ ಗ್ರಾಮಸ್ಥರು ವಿರೋಧಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಮೊರೆ ಹೋಗಿದ್ದರು. ಅಂತೆಯೇ ಇನ್ನೊಂದು ತಂಡ ಉಗ್ಗನಮನೆ ಮಜಿರೆಯಲ್ಲಿ ಪಂಚಾಯತ್ ಕಟ್ಟಡ ಸೂಕ್ತ ಎಂದು ಸಂಬಂಧಪಟ್ಟವರ ಗಮನ ಸೆಳೆಯಲು ಮುಂದಾಗಿದ್ದರು.
ಆದರೀಗ ವಾದ ವಿವಾದಗಳ ನಡುವೆ ಕಲ್ಲಬ್ಬೆ ನಿವಾಸಿ ರಾಮಚಂದ್ರ ಗಣಪತಿ ಭಟ್ ಈ ಹಿಂದೆ ಗ್ರಾಮ ಸಭೆಯಲ್ಲಿ ತೀರ್ಮಾನಿಸಿದಂತೆ ಕಲ್ಲಬ್ಬೆಯಲ್ಲಿಯೇ ಪಂಚಾಯತ್ ಕಟ್ಟಡ ನಿರ್ಮಾಣಗೊಳ್ಳಬೇಕು ಎಂಬ ದೃಷ್ಟಿಯಿಂದ ತನ್ನ ಸರ್ವೆ ನಂ. 341/1ರ ಸುಮಾರು 5 ಕುಂಟೆ ಜಾಗವನ್ನು ಸ್ವಯಂ ಪ್ರೇರಣೆಯಿಂದ ಪಂಚಾಯತ್ಗೆ ಹಸ್ತಾಂತರಿಸಲು ಮುಂದಾಗಿದ್ದಾರೆ. ಅಲ್ಲದೇ ತಮ್ಮ ಜಾಗದಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿದಲ್ಲಿ ಜನರಿಗೆ ಉಪಯೋಗವಾಗಲಿದೆ ಎಂದು ಅರ್ಜಿ ಸಲ್ಲಿಸಿದ್ದಾರೆ.