ಭಟ್ಕಳ: ತಾಲೂಕಿನ ವಿವಿಧೆಡೆ ಕೊರೊನಾ ಹಿನ್ನೆಲೆ ಒಂದೇ ದಿನ ಅತ್ಯಂತ ಸರಳವಾಗಿ ಗಣೇಶ ಹಬ್ಬ ಆಚರಿಸಿದ್ದು, ನಿಮಜ್ಜನ ಕಾರ್ಯಕ್ರಮವೂ ಕೂಡ ಶಾಂತಿಯುತವಾಗಿ ನಡೆದಿದೆ.
ಕೋವಿಡ್-19ನ್ನು ನಿಯಂತ್ರಿಸುವ ಸಲುವಾಗಿ ಹಾಗೂ ಧಾರ್ಮಿಕ ಆಚರಣೆಗೂ ಧಕ್ಕೆ ಬಾರದಂತೆ ಸರಳವಾಗಿ ಹಬ್ಬ ಆಚರಣೆ ಮಾಡಲು ಸರ್ಕಾರದಿಂದ ಅವಕಾಶವನ್ನು ಕಲ್ಪಿಸಿಕೊಡಲಾಗಿತ್ತು. ಆದರೆ ಈ ವರ್ಷ ಸಕಾಲಕ್ಕೆ ಮಳೆಯಾಗಿದ್ದರೂ ಸಹ ಕೊರೊನಾ ಭಯದಲ್ಲಿ ರೈತರು ಹಾಗೂ ಪಟ್ಟಣದ ಜನತೆ ಸಂಪ್ರದಾಯದಂತೆ ಇತ್ತ ಹಬ್ಬ ಆಚರಿಸಲೂ ಆಗದೆ, ಬಿಡಲೂ ಆಗದಂತ ಪರಿಸ್ಥಿತಿಯಲ್ಲಿದ್ದರು. ಶನಿವಾರ ಬೆಳಗ್ಗೆ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಿದರು.
ತಾಲೂಕಿನ ನಲ್ಲಿ ಒಟ್ಟು 103 ಕಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದು, ಅದರಲ್ಲಿ ಭಟ್ಕಳ ನಗರದಲ್ಲಿ 12, ಗ್ರಾಮೀಣ ಭಾಗದಲ್ಲಿ 38, ಮುರುಡೇಶ್ವರ 30, ಸೇರಿದಂತೆ 80 ಕಡೆ ಸಂಜೆ ನಿಮಜ್ಜನ ಮಾಡಲಾಗಿದೆ.
ಗಣೇಶ ಮೂರ್ತಿಯ ನಿಮಜ್ಜನ ಪೂಜೆ ಮುಗಿಸಿ ಶಾಂತಿಯುತವಾಗಿ ಮೆರವಣಿಗೆ ಮೂಲಕ ಭಟ್ಕಳ ಹಳೆ ಬಸ್ ನಿಲ್ದಾಣದಿಂದ ಮಾರಿಕಾಂಬಾ ದೇವಸ್ಥಾನದ ಮಾರ್ಗವಾಗಿ ಚೌಥನಿಯ ಕುದುರೆ ಬೀರಪ್ಪ ಹೊಳೆಯಲ್ಲಿ ಹಾಗೂ ಇನ್ನುಳಿದ ಭಾಗದಲ್ಲಿ ನಿಮಜ್ಜನ ನೆರವೇರಿಸಲಾಯಿತು.