ಕಾರವಾರ(ಉತ್ತರ ಕನ್ನಡ): ಹೆತ್ತ ತಾಯಿ ಹಾಗೂ ಕುಟುಂಬದವರನ್ನು ಕೊಂದ ಕೆಂಪು ಗೂಟದ ವಾಹನದ ವಿರುದ್ಧ ಪ್ರತೀಕಾರಕ್ಕಾಗಿ ನಾಯಿಯೊಂದು ಅಂಕೋಲಾ ತಾಲೂಕಿನ ಹಟ್ಟಿಕೇರಿ ಟೋಲ್ ಗೇಟ್ ಬಳಿ ಹವಣಿಸುತ್ತಿದೆ.
ವರ್ಷದ ಹಿಂದೆ ಅಪಘಾತ.. ವರ್ಷದ ಹಿಂದೆ ಇಲ್ಲಿನ ಟೋಲ್ ಗೇಟ್ ಬಳಿ ಮರಿ ಹಾಕಿಕೊಂಡಿದ್ದ ನಾಯಿಯೊಂದು ವೇಗವಾಗಿ ವಿಐಪಿ ಗೇಟ್ ಮೂಲಕ ಬಂದ ಕೆಂಪು ಗೂಟದ ವಾಹನವೊಂದಕ್ಕೆ ಡಿಕ್ಕಿಯಾಗಿ ತನ್ನ ಮರಿಗಳೊಂದಿಗೆ ಸಾವನ್ನಪ್ಪಿತ್ತು. ಆದರೆ ಅದರಲ್ಲಿ ಒಂದು ಗಂಡು ಮರಿ ಮಾತ್ರ ಬದುಕುಳಿದಿದ್ದು, ಅಂದು ತನ್ನ ತಾಯಿ ಹಾಗೂ ಒಡಹುಟ್ಟಿದವರನ್ನು ಕೊಂದ ಕೆಂಪು ಗೂಟದ ಕಾರಿನ ವಿರುದ್ಧ ಪ್ರತೀಕಾರಕ್ಕಾಗಿ ನಿತ್ಯವೂ ಹವಣಿಸುತ್ತಿದೆ.
ಟೋಲ್ ಗೇಟ್ ಬಳಿ ಬರುವ ಕೆಂಪು ಗೂಟದ ವಾಹನ ಕಂಡ್ರೆ ಅಟ್ಯಾಕ್.. ಟೋಲ್ ಗೇಟ್ ಮೂಲಕ ಬರುವ ಪೊಲೀಸ್, ಆ್ಯಂಬುಲೆನ್ಸ್, ವಿಐಪಿ ಹೀಗೆ ಯಾವುದೇ ವಾಹನದಲ್ಲಿ ಸೈರನ್ ಕೇಳಿದ ತಕ್ಷಣ ಓಡಿಬರುವ ನಾಯಿಯೂ ದಾರಿಗೆ ಅಡ್ಡಲಾಗಿ ಪ್ರತೀಕಾರಕ್ಕಾಗಿ ಬೆನ್ನಟ್ಟುತ್ತಿದೆ. ನಾಯಿಯ ಕಥೆ ತಿಳಿದಿರುವ ಟೋಲ್‌ಗೇಟ್ ಸಿಬ್ಬಂದಿ ಹಾಗೂ ಕೆಲ ಸ್ಥಳೀಯರು ಪ್ರತಿದಿನ ಈ ದೃಶ್ಯವನ್ನ ಕಂಡು ಮರುಕಪಡುತ್ತಾರೆ.
ಆದರೆ ಟೋಲ್‌ಗೇಟ್ ಸಿಬ್ಬಂದಿ ಜೊತೆ ಅನ್ಯೋನ್ಯವಾಗಿರುವ ಶ್ವಾನ, ಸಿಬ್ಬಂದಿ ಕೊಡುವ ಆಹಾರ ತಿಂದು, ಟೋಲ್‌ಗೇಟ್‌ನ ಬದಿಯಲ್ಲೇ ಆಶ್ರಯ ಪಡೆದುಕೊಂಡಿದೆ. ಆದರೆ ಸೈರನ್ ಇಲ್ಲದ ವಾಹನಗಳಿಗೆ ನಾಯಿ ಯಾವುದೇ ರೀತಿಯ ತೊಂದರೆ ಕೊಡುವುದಿಲ್ಲ. ವಿಐಪಿ ಲೇನ್‌ನಿಂದ ಬರುವ ಸೈರನ್ ಹೊಂದಿರುವ ವಾಹನಗಳ ಮೇಲೆ ಮಾತ್ರ ಎಗರುತ್ತಿದೆ.
ಸೈರನ್ ಹಾಕಿ ಬಂದಿರುವ ವಾಹನವೇ ತನ್ನ ತಾಯಿಯನ್ನು ಅಪಘಾತವೆಸಗಿ ಸಾವಿಗೆ ಕಾರಣವಾಗಿದೆ ಎಂದು ತಿಳಿದು ಈ ರೀತಿ ಮಾಡುತ್ತಿದೆ ಎನ್ನುತ್ತಾರೆ ಇಲ್ಲಿನ ಟೋಲ್‌ಗೇಟ್ ಸಿಬ್ಬಂದಿ.
ಇದನ್ನೂ ಓದಿ.. ಬೆಳಗಾವಿಯಲ್ಲಿ ಪಿಡಬ್ಲೂಡಿ ಇಲಾಖೆಯ ನೌಕರ ಆತ್ಮಹತ್ಯೆ; ಕಾರಣ ನಿಗೂಢ!