ಕಾರವಾರ: ಜಿಲ್ಲೆಯಿಂದ ಶಬರಿಮಲೆಗೆ ಮಾಲಾಧಾರಿಗಳು ಪಾದಯಾತ್ರೆ ಆರಂಭಿಸಿದ್ದು, ಈ ವೇಳೆ ಶ್ವಾನವೊಂದು ಮಾಲಾಧಾರಿಗಳ ಜೊತೆಯಾಗಿ ಪಾದಯಾತ್ರೆಯಲ್ಲಿ ಭಾಗಿಯಾಗಿ ಅಚ್ಚರಿ ಮೂಡಿಸಿದೆ.
ಧಾರವಾಡದ ಮಂಗಳಗಟ್ಟಿಯಿಂದ ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಮಾಲಾಧಾರಿಗಳಿಗೆ ಧಾರವಾಡದ ಟೋಲ್ವೊಂದರ ಬಳಿ ಶ್ವಾನವೊಂದು ಜೊತೆಯಾಗಿದೆ. ಪ್ರಾರಂಭದಲ್ಲಿ ನಾಯಿ ತಮ್ಮನ್ನು ಹಿಂಬಾಲಿಸಿ ಬರುವುದು ಯಾವೊಬ್ಬ ಭಕ್ತರಿಗೂ ಗಮನಕ್ಕೆ ಬಂದಿರಲಿಲ್ಲ. ಆದರೆ ಬಹುದೂರ ಸಾಗಿ ಬಂದಾಗಲೂ ನಾಯಿ ತಮ್ಮ ತಂಡದೊಂದಿಗೆ ಬರುತ್ತಿರುವುದನ್ನು ಕಂಡು ಅಚ್ಚರಿಗೊಂಡ ಭಕ್ತರು ಶ್ವಾನಕ್ಕೆ ತಿಂಡಿ ಹಾಕಿದ್ದಾರೆ. ಬಳಿಕವೂ ಬೆಂಬಿಡದ ಶ್ವಾನ ನಿರಂತರವಾಗಿ 9 ದಿನಗಳ ಕಾಲ ಭಕ್ತರ ಜೊತೆ ಹೆಜ್ಜೆ ಹಾಕಿದ್ದು, ಇದೀಗ 200 ಕಿ.ಮೀ ಕ್ರಮಿಸಿ ಹೊನ್ನಾವರ ತಲುಪಿದೆ.
ಇನ್ನು, 1100 ಕಿ.ಮೀ ದೂರದ ಕೆರಳದ ಶಬರಿಮಲೆಗೆ ತೆರಳುತ್ತಿರುವ 3 ಅಯ್ಯಪ್ಪ ಭಕ್ತರ ತಂಡದೊಡನೆ ಈ ನಾಯಿ ಪ್ರಯಾಣ ಬೆಳೆಸಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ವ್ರತಧಾರಿಗಳ ತಂಡ ವಿಶ್ರಾಂತಿ ಪಡೆಯುವ ಸಂಧರ್ಭ ಅದೂ ವಿಶ್ರಾಂತಿ ಪಡೆಯುತ್ತದೆ. ಮುಂಜಾನೆ ಬೇಗ ಎದ್ದು ಎಲ್ಲರೊಂದಿಗೆ ಹೆಜ್ಜೆ ಹಾಕುತ್ತದೆ. ಶ್ವಾನ ನಮ್ಮ ಜೊತೆಯಾಗಿರುವುದು ನಮಗೆ ಒಳ್ಳೆಯದಾಗಿದೆ ಎನ್ನುತ್ತಾರೆ ಮಾಲಾಧಾರಿಗಳು.
ನಮ್ಮ ಜೊತೆ ಆಟವಾಡುವುದರ ಜೊತೆಗೆ ನಮ್ಮ ವಸ್ತುಗಳನ್ನು ಕಾಯುತ್ತದೆ. ಮಾತ್ರವಲ್ಲದೆ ಅಷ್ಟೇ ಉತ್ಸಾಹದಿಂದ ನಮ್ಮೊಡನೆ ಹೆಜ್ಜೆ ಹಾಕುತ್ತದೆ. ಇದು ಅಯ್ಯಪ್ಪ ಸ್ವಾಮಿಯ ಲೀಲೆ ಎನ್ನುತ್ತಾರೆ ಮತ್ತೋರ್ವ ವ್ರತಧಾರಿ ಮಂಜು ಸ್ವಾಮಿ. ಇನ್ನು, ವ್ರತಧಾರಿಗಳು ಶ್ವಾನಕ್ಕೆ ಮಾಳಗಿ ಎಂದು ಹೆಸರಿಸಿದ್ದಾರೆ. ಮಾಳಗಿ ಎಂದರೆ ಶಬರಿಮಲೆಗೆ ಬರುವ ಮಹಿಳಾ ವ್ರತಧಾರಿಗಳನ್ನು ಮಾಳಿಗೆಪುರತ್ತಮ್ಮ ಎಂದು ಕರೆಯುತ್ತಾರೆ. ಹೀಗಾಗಿ ಶಬರಿಮಲೆ ಪಾದಯಾತ್ರೆಗೆ ಜೊತೆಯಾದ ಹೆಣ್ಣು ಶ್ವಾನಕ್ಕೆ ಮಾಳಗಿ ಎಂದು ಹೆಸರನ್ನು ಇಡಲಾಗಿದೆ.
ಇದನ್ನೂ ಓದಿ: ಚಾಮರಾಜನಗರದಲ್ಲಿ ಮಂಜಿನ ಚಾದರ.. ಚುಮುಚುಮು ಚಳಿ ಕಾಡಲ್ಲಿ ಹಸಿರಿನ ಕಚಗುಳಿ