ಕಾರವಾರ: ಮನೆಯಲ್ಲಿ ಖಾಲಿ ಕುಳಿತು ಕಾಲಹರಣ ಮಾಡದೇ ಕೆಲಸಕ್ಕೆ ತೆರಳುವಂತೆ ಬುದ್ಧಿವಾದ ಹೇಳಿದ ತಮ್ಮನನ್ನೇ ಆತನ ಹಿರಿಯ ಸಹೋದರ ಕೊಚ್ಚಿ ಕೊಲೆ ಮಾಡಿರುವ ಘಟನೆ ಹೊನ್ನಾವರ ಪಟ್ಟಣದ ಚರ್ಚ್ ರಸ್ತೆಯಲ್ಲಿ ಭಾನುವಾರ ತಡರಾತ್ರಿ ಬೆಳಕಿಗೆ ಬಂದಿದೆ.
ಅರ್ಜುನ ಶಂಕರ ಮೇಸ್ತ (23) ಕೊಲೆಯಾದ ವ್ಯಕ್ತಿ. ಈತನ ಅಣ್ಣ ಕೃಷ್ಣ ಮೇಸ್ತ ಕೊಲೆ ಮಾಡಿದ ಆರೋಪಿ. ಅಣ್ಣ ಕೆಲಸಕ್ಕೆ ತೆರಳದೆ ಮನೆಯಲ್ಲಿದ್ದುಕೊಂಡು ಕಾಲಹರಣ ಮಾಡುತ್ತಿದ್ದರಿಂದ ತಮ್ಮ ದುಡಿಯಲು ತೆರಳುವಂತೆ ಬುದ್ಧಿವಾದ ಹೇಳಿದ್ದ. ಅಲ್ಲದೇ, ಇದೇ ವಿಷಯದ ಕುರಿತು ಆಗಾಗ ಇಬ್ಬರ ನಡುವೆ ಜಗಳ ಕೂಡ ಆಗುತ್ತಿತ್ತು ಎನ್ನಲಾಗಿದೆ. ಆದರೆ, ಭಾನುವಾರ ಅಣ್ಣ-ತಮ್ಮಂದಿರ ಜಗಳ ವಿಕೋಪಕ್ಕೆ ತಿರುಗಿದ್ದು, ಕೊಲೆಯಲ್ಲಿ ಅಂತ್ಯ ಕಂಡಿದೆ.
ಕೃಷ್ಣ ಮೇಸ್ತ ತನ್ನ ತಮ್ಮನನನ್ನು ಕೊಲೆ ಮಾಡಿ ಬೆಡ್ಶೀಟ್ನಿಂದ ಮುಚ್ಚಿ ಮನೆಗೆ ಬೀಗ ಹಾಕಿ ನಾಪತ್ತೆಯಾಗಿದ್ದ. ಸಂಜೆ ವೇಳೆಗೆ ಹೋಟೆಲ್ ಕೆಲಸಕ್ಕೆ ಹೋಗಿದ್ದ ತಾಯಿ, ಕೆಲಸ ಮುಗಿಸಿ ಮನೆಗೆ ಬಂದು ಬೀಗ ಹಾಕಿರುವುದನ್ನು ನೋಡಿ, ಎಷ್ಟು ಕಾದರೂ ಇಬ್ಬರೂ ಬಾರದೇ ಇದ್ದಾಗ ಬಾಗಿಲು ಒಡೆದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ.
ಈ ಕುರಿತು ಅರ್ಜುನ ಶಂಕರ ಮೇಸ್ತ ತಾಯಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬೆಳಗಾಗುವುದರೊಳಗೆ ಆರೋಪಿಯನ್ನು ಪತ್ತೆಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ವಾಹನ ಚಲಾಯಿಸುವಾಗ ಮೂರ್ಛೆ ಬಂದು ಒದ್ದಾಡಿದ ಚಾಲಕ: ಆರೈಕೆ ಮಾಡಿ ಮಾನವೀಯತೆ ಮೆರೆದ ಪೊಲೀಸ್