ಶಿರಸಿ: ಇಂದು ಇಬ್ಬರಲ್ಲಿ ಮಹಾಮಾರಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಮವಾರವಷ್ಟೇ ಒಂದು ಬಲಿ ಪಡೆದ ಕೊರೊನಾ, ಇಂದು ತಾಲೂಕಿನ ಇಬ್ಬರಲ್ಲಿ ಕಾಣಿಸಿಕೊಂಡಿದೆ. ಗಣೇಶ ನಗರದ 45 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇವರು ತಾಲೂಕಿನ ಕಲ್ಲಿಯಲ್ಲಿರುವ ಸರ್ಕಾರಿ ಕ್ವಾರೆಂಟೈನ್ನಲ್ಲಿದ್ದರು.
ಇನ್ನೋರ್ವ ಇಲ್ಲಿನ ಮಾರಿಕಾಂಬಾ ನಗರದ 36 ವರ್ಷದ ವ್ಯಕ್ತಿಯಾಗಿದ್ದು, ಶಿರಸಿಯಲ್ಲಿ ಖಾಸಗಿ ಲಾಡ್ಜ್ಗಳ ಕೊರತೆಯಿಂದ ಜಿಲ್ಲೆಯ ಭಟ್ಕಳಕ್ಕೆ ಹೋಗಿ ಸೆಲ್ಫ್ ಕ್ವಾರಂಟೈನ್ (ಭಟ್ಕಳದ ಖಾಸಗಿ ಲಾಡ್ಜ್ ನಲ್ಲಿ )ಆಗಿದ್ದರು. ಇದೀಗ ಇಬ್ಬರಿಗೂ ಕೊರೊನಾ ಪಾಸಿಟಿವ್ ಬಂದಿದ್ದು, ಹೆಚ್ಚಿನ ಚಿಕಿತ್ಸೆಗೆ ಕಾರವಾರದ ಕ್ರಿಮ್ಸ್ಗೆ ಕರೆದೊಯ್ಯಲಾಗಿದೆ.
ಕಳೆದ ತಿಂಗಳು ಮಹಾರಾಷ್ಟ್ರದಿಂದ ಆಗಮಿಸಿರುವ ಗಣೇಶ ನಗರದ ವ್ಯಕ್ತಿಯ ಪತ್ನಿ ಹಾಗೂ ಮಗಳಿಗೆ ಈ ಹಿಂದೆ ಕೊರೊನಾ ದೃಢಪಟ್ಟಿತ್ತು. ನಂತರ ಅವರು ಕಾರವಾರಕ್ಕೆ ತೆರಳಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅವರ ಪ್ರಾಥಮಿಕ ಸಂಪರ್ಕದ ಕಾರಣ ಪತಿಯ ಗಂಟಲು ದ್ರವ ಪರೀಕ್ಷೆ ನಡೆಸಿದ್ದರು. ಈಗ ಅವರಿಗೂ ಸೋಂಕು ತಗುಲಿರುವುದು ದೃೃಢಪಟ್ಟಿದೆ.
ಇನ್ನೂ ಮಾರಿಕಾಂಬಾ ನಗರದ ವ್ಯಕ್ತಿ ದುಬೈನಿಂದ ಮುಂಬೈಗೆ ಆಗಮಿಸಿದ್ದು, ಮುಂಬೈನಲ್ಲಿ 7 ದಿನಗಳ ಕಾಲ ಕ್ವಾರಂಟೈನ್ನಲ್ಲಿದ್ದರು. ನಂತರ ಅಲ್ಲಿಂದ ಶಿರಸಿಗೆ ಆಗಮಿಸಬೇಕಾಗಿದ್ದರೂ ಇಲ್ಲಿ ಯಾವುದೇ ಖಾಸಗಿ ಹೊಟೇಲ್ಗಳು ಲಭ್ಯವಿರದ ಕಾರಣ ಭಟ್ಕಳದಲ್ಲಿ ಕ್ವಾರಂಟೈನ್ ಆಗಿದ್ದರು. ಆದರೆ ಶಿರಸಿಯ ಮಾರಿಕಾಂಬಾ ನಗರದ ವಿಳಾಸ ನೀಡಿದ ಕಾರಣ ಆತ ಶಿರಸಿಯ ಸೋಂಕಿತ ಎಂದು ಗುರುತಿಸಲಾಗಿದ್ದು, ಭಟ್ಕಳದಿಂದಲೇ ಆತನನ್ನು ಹೆಚ್ಚಿನ ಚಿಕಿತ್ಸೆಗೆ ಕರೆದೊಯ್ಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.