ಕಾರವಾರ: ಕೊರೊನಾ ಸೋಂಕು ಅಬ್ಬರದಿಂದಾಗಿ ಕಳೆದ ಏಳೆಂಟು ತಿಂಗಳಿಂದ ಬಂದ್ ಆಗಿದ್ದ ಶಾಲೆಗಳು ಮತ್ತೆ ಆರಂಭವಾಗಿವೆ. ಉತ್ತರಕನ್ನಡ ಜಿಲ್ಲೆಯಲ್ಲೂ ಸಹ ವಿದ್ಯಾರ್ಥಿಗಳು ಹುಮ್ಮಸ್ಸಿನಿಂದಲೇ ಶಾಲೆಗಳಿಗೆ ಆಗಮಿಸುತ್ತಿದ್ದು ವಿದ್ಯಾಗಮಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಆದರೆ ಶಾಲೆಗಳು ಪ್ರಾರಂಭವಾಗಿ ವಾರದೊಳಗೆ ಬರೋಬ್ಬರಿ 18 ಮಂದಿ ಶಿಕ್ಷಕರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿರೋದು ಪಾಲಕರ ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ಸರ್ಕಾರದ ಆದೇಶದಂತೆ ಜನವರಿ 1 ರಿಂದ ಉತ್ತರಕನ್ನಡ ಜಿಲ್ಲೆಯಲ್ಲೂ ಶಾಲೆಗಳು ಪ್ರಾರಂಭವಾಗಿವೆ. ಕೊರೊನಾ ಅಬ್ಬರದ ನಂತರ ಸಾಕಷ್ಟು ತಿಂಗಳ ಬಳಿಕ ಶಾಲೆಗಳು ತೆರೆದುಕೊಳ್ಳುತ್ತಿದ್ದು ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. ಅದರಂತೆ ಜನವರಿ 1ರ ಪೂರ್ವದಲ್ಲೇ ಶಿಕ್ಷಕರುಗಳಿಗೆ ಕೋವಿಡ್ ಪರೀಕ್ಷೆ ನಡೆಸಿದ್ದು, ಇದೀಗ ವರದಿ ಇದೀಗ ವಿದ್ಯಾರ್ಥಿಗಳು ಹಾಗೂ ಪಾಲಕರನ್ನು ಚಿಂತೆಗೀಡು ಮಾಡಿದೆ.
ಉತ್ತರಕನ್ನಡ ಜಿಲ್ಲೆ ವಿಶಾಲವಾಗಿದ್ದು 12 ತಾಲ್ಲೂಕುಗಳನ್ನು ಹೊಂದಿದೆ. ಕಾರವಾರ ಹಾಗೂ ಶಿರಸಿಯನ್ನು ಶೈಕ್ಷಣಿಕ ಜಿಲ್ಲೆಗಳೆಂದು ವಿಂಗಡಿಸಲಾಗಿದೆ. ಅದರಂತೆ ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಈವರೆಗೆ 5,223, ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 4,807 ಶಿಕ್ಷಕರು ಹಾಗೂ ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿದೆ. ಎರಡೂ ಜಿಲ್ಲೆಯಲ್ಲೂ ತಲಾ 9 ಮಂದಿ ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಇದುವರೆಗೆ ಶಿರಸಿ ಜಿಲ್ಲೆಯಲ್ಲಿ ಎಲ್ಲಾ ಶಿಕ್ಷಕರ ಹಾಗೂ ಸಿಬ್ಬಂದಿಗಳ ಪರೀಕ್ಷೆ ಪೂರ್ಣಗೊಂಡಿದೆ. ಆದರೆ ಕಾರವಾರದಲ್ಲಿ ಶೇ 95ರಷ್ಟು ಶಿಕ್ಷಕರು ಹಾಗೂ ಸಿಬ್ಬಂದಿಗೆ ಪರೀಕ್ಷೆ ನಡೆಸಲಾಗಿದೆ.
ಮೊದಲ ಹಂತದಲ್ಲಿ ಶಿಕ್ಷಕರಿಗೆ ಹಾಗೂ ಸಿಬ್ಬಂದಿಗೆ ಆರ್‌ಟಿಪಿಸಿಆರ್ ಮೂಲಕ ಪರೀಕ್ಷೆ ನಡೆಸಿದ ವೇಳೆಯಲ್ಲಿ 18 ಮಂದಿಗೆ ಸೋಂಕು ದೃಢಪಟ್ಟಿದ್ದು ಈ ವಿಚಾರ ಇದೀಗ ಪಾಲಕರ ತಲೆನೋವಿಗೆ ಕಾರಣವಾಗಿದೆ. ಮಕ್ಕಳ ಶೈಕ್ಷಣಿಕ ಭವಿಷ್ಯದ ದೃಷ್ಟಿಯಿಂದ ಸಾಕಷ್ಟು ಮಂದಿ ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ಮುಂದಾಗಿದ್ದರು. ಆದ್ರೆ ಇದೀಗ ಶಿಕ್ಷಕರಲ್ಲೇ ಕೋವಿಡ್ ಸೋಂಕು ಕಂಡು ಬಂದಿದ್ದು ಮಕ್ಕಳನ್ನು ಕಳುಹಿಸಲು ಆತಂಕಪಡುವಂತಾಗಿದೆ.
ಅಲ್ಲದೇ ಈಗಾಗಲೇ ಆನ್‌ಲೈನ್ ಮೂಲಕ ವಿದ್ಯಾರ್ಥಿಗಳಿಗೆ ತರಗತಿಗಳು ಪ್ರಾರಂಭವಿದ್ದು ಮಕ್ಕಳೂ ಸಹ ಮನೆಯಲ್ಲಿಯೇ ವಿದ್ಯಾಭ್ಯಾಸವನ್ನು ಮಾಡಿಕೊಳ್ಳುತ್ತಿದ್ದರು. ಆದ್ರೆ ಸರ್ಕಾರ ಕೊರೊನಾ ಆತಂಕದ ನಡುವೆಯೂ ಖಾಸಗಿ ಶಿಕ್ಷಣ ಸಂಸ್ಥೆಗಳ ಮನವೊಲಿಸಲು ಶಾಲೆಗಳನ್ನು ಪ್ರಾರಂಭಿಸಿದೆ ಎಂದು ಪಾಲಕರಾದ ದೀಪಕ ಶೆಣ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುವಂತೆ ಶಿಕ್ಷಕರು ತರಗತಿಗಳಿಗೆ ಹಾಜರಾಗುವ ಮೊದಲೇ ಕೊರೊನಾ ಪರೀಕ್ಷೆ ಮಾಡಿಸಿದ್ದು ಈ ವೇಳೆಯೇ ಪಾಸಿಟಿವ್ ಪತ್ತೆಯಾಗಿದೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೂ ಸಹ ಸೂಕ್ತ ರೀತಿಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನ ಪಾಲನೆ ಮಾಡಲಾಗುತ್ತಿದ್ದು ವಿದ್ಯಾರ್ಥಿಗಳಿಗೆ ಯಾವುದೇ ಆತಂಕ ಇಲ್ಲ ಎಂದು ಕಾರವಾರ ಶೈಕ್ಷಣಿಕ ಜಿಲ್ಲೆಯ ಡಿಡಿಪಿಐ ಹರೀಶ್ ಗಾಂವ್ಕರ್ ತಿಳಿಸಿದ್ದಾರೆ.