ಕಾರ್ಕಳ: ನಗರದ ಸರ್ಕಾರಿ ಆಸ್ಪತ್ರೆಗೆ ಎದೆನೋವು ಮತ್ತು ಉಸಿರಾಟದ ತೊಂದರೆ ಇದೆ ಎಂದು ದಾಖಲಾಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಪೊಲೀಸರ ನಿರ್ಲಕ್ಷ್ಯ ಮತ್ತು ಆಸ್ಪತ್ರೆಯಲ್ಲಿ ಸಕಾಲಕ್ಕೆ ಚಿಕಿತ್ಸೆ ಲಭಿಸದೇ ಸಾವನ್ನಪ್ಪಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.
ತಾಲೂಕಿನ ನಲ್ಲೂರು ಗ್ರಾಮದ ಮಂಜುಳಾ(38) ಮೃತ ಮಹಿಳೆ. ಇಂದು ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಮಹಿಳೆಯನ್ನು ಕಾರ್ಕಳದ ಸರಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಬಜಗೋಳಿ ಸಮೀಪದ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ಲಾಕ್‌ಡೌನ್ ನೆಪವೊಡ್ಡಿ ವಾಹನವನ್ನು ತಡೆದು ವಾಪಸ್ ಕಳುಹಿಸಿದ್ದರು ಎನ್ನಲಾಗಿದೆ.
ಬಳಿಕ ಒಳರಸ್ತೆಯ ಮೂಲಕ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲೂ ವೈದ್ಯರಿಲ್ಲ ಎಂಬ ಕಾರಣ ನೀಡಿದ್ದರಿಂದ ಮಂಜುಳಾರಿಗೆ ತಕ್ಷಣಕ್ಕೆ ಚಿಕಿತ್ಸೆ ಲಭಿಸಿಲ್ಲ. ಇದರಿಂದ ಮಹಿಳೆ ಮೃತಪಟ್ಟಿರುವುದಾಗಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಜಗೋಳಿ ಸಮೀಪದ ಚೆಕ್ ಪೋಸ್ಟ್‌ನಲ್ಲಿ ಪೊಲೀಸರು ನಮ್ಮ ವಾಹನವನ್ನು ತಡೆದು ನಿಲ್ಲಿಸಿ, ಹಿಂದಿರುಗುವಂತೆ ಸೂಚಿಸಿದರು. ಆ ವೇಳೆ, ಮಂಜುಳಾರಿಗೆ ತೀವ್ರ ಎದೆನೋವು ಇತ್ತು. ಎಷ್ಟು ಗೋಗರೆದರೂ ಪೊಲೀಸರು ಅವಕಾಶ ನೀಡಲಿಲ್ಲ. ಬೇಕಾದರೆ 108 ಆ್ಯಂಬುಲನ್ಸ್ ಗೆ ಕರೆ ಮಾಡಿ, ಅದರಲ್ಲಿ ಕರೆದುಕೊಂಡು ಹೋಗಿ. ನಿಮ್ಮ ವಾಹನವನ್ನು ಬಿಡಲು ಸಾಧ್ಯವಿಲ್ಲ ಎಂದರು. ಆನಂತರ ನಾವು ಬೇರೆ ಒಳರಸ್ತೆಯಾಗಿ ಕಾರ್ಕಳ ತಲುಪಿದೆವು. ಆಸ್ಪತ್ರೆಗೆ ಬರುವುದು ತಡವಾದ್ದರಿಂದಲೇ ಮಂಜುಳಾರನ್ನು ನಾವು ಕಳೆದುಕೊಂಡೆವು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.