ಉಡುಪಿ: ಪ್ರವಾಸಿಗರ ಮನದಾಸೆ ನೀಗಿಸುವ ಸಲುವಾಗಿ ಉಡುಪಿಯ ಪಿತ್ರೋಡಿ ಬೀಚ್ನಲ್ಲಿ ಒಂದು ವಿಶಿಷ್ಟವಾದ ಜಲಕ್ರೀಡೆ ಆರಂಭಿಸಲಾಗಿದೆ. ಅದರ ಅನುಭವ ಪಡೆದ ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿರುವುದಷ್ಟೇ ಅಲ್ಲದೆ ಮತ್ತೆ ಮತ್ತೆ ಅಲ್ಲಿಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಯಾವುದು ಆ ತಾಣ?. ಅಂತಹ ಯಾವ ಹೊಸ ಪ್ರಯೋಗ ಪ್ರವಾಸಿಗರನ್ನ ಅಲ್ಲಿಗೆ ಆಕರ್ಷಿಸುತ್ತಿದೆ.
ಜಿಲ್ಲೆಯ ಪಿತ್ರೋಡಿ ಬೀಚ್ನಲ್ಲಿ ಕಾಲಕಳೆಯಲು ಬರುವ ಪ್ರವಾಸಿಗರು ಹೊಸ ಅನುಭವದೊಂದಿಗೆ ಮರಳುವಂತೆ ಮಾಡಲು ಕಯಾಕಿಂಗ್ ಜಲಕ್ರೀಡೆ ಪ್ರಾರಂಭಿಸಲಾಗಿದೆ. ಕಯಾಕಿಂಗ್ ಕೇರಳದಲ್ಲಿ ಜನಪ್ರಿಯ ಹಾಗೂ ಸಾಮಾನ್ಯವಾಗಿದ್ದು, ಪ್ರವಾಸಿಗರಿಗೆ ನೂತನ ಅನುಭವ ನೀಡುವಂತದ್ದಾಗಿದೆ. ಸ್ಥಳೀಯ ಉತ್ಸಾಹಿ ಯುವಕರೇ ಸೇರಿಕೊಂಡು ಕಯಾಕಿಂಗ್ ನಡೆಸುತ್ತಿದ್ದು, 90 ನಿಮಿಷಗಳ ಅವಧಿಯಲ್ಲಿ ಪ್ರವಾಸಿಗರಿಗೆ ಅಲ್ಲಿನ ಸಂಪೂರ್ಣ ಚಿತ್ರಣ, ಅನುಭವ ನೀಡುವಲ್ಲಿ ನೆರವಾಗುತ್ತಿದ್ದಾರೆ.
ಕಯಾಕಿಂಗ್ ವೇಳೆ ಕಾಂಡ್ಲ ಕಾಡು, ಮಾಂಗ್ರೋವ್ ಕಾಡುಗಳಲ್ಲಿನ ವಿವಿಧ ಸಸ್ಯರಾಶಿಯ ಪ್ರಭೇದಗಳ ಬಗ್ಗೆ, ಅಲ್ಲಿಗೆ ವಲಸೆ ಬರುವ ವಿದೇಶಿ ಪಕ್ಷಿಗಳ ಬಗ್ಗೆ, ಬೀಚ್ನಲ್ಲಿರುವ ಮೀನುಗಳು ಹಾಗೂ ಅವುಗಳ ಸಂತತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ಪ್ರಕೃತಿಯ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಹೊಸ ಹೊಸ ವಿಚಾರಗಳ ಮಾಹಿತಿ ತಿಳಿಯುತ್ತಾ ನೀರಿನ ಮಧ್ಯೆ ಕಳೆಯುವ ಪ್ರತಿಯೊಂದು ಕ್ಷಣವೂ ರೋಮಾಂಚನಕಾರಿ ಎನಿಸುತ್ತದೆ. ಕಯಾಕಿಂಗ್ ಒಂದು ನೂತನ ಅನುಭವವಾದರೂ ಯಾವುದೇ ಭಯವಿಲ್ಲದೇ ಕಾಲ ಕಳೆಯುವಲ್ಲಿ ಅದನ್ನು ನಿರ್ವಹಿಸುತ್ತಿರುವ ಯುವಕರು ನೆರವಾಗುತ್ತಾರೆ. ಯುವಕರ ಈ ಪ್ರಯತ್ನಕ್ಕೆ ಪ್ರವಾಸೋದ್ಯಮ ಇಲಾಖೆ ಕೈಚೋಡಿಸಿ ಹೆಚ್ಚಿನ ಪ್ರೋತ್ಸಾಹ ನೀಡಿ ಬೆಳೆಸಬೇಕಿದೆ.
ಕಯಾಕಿಂಗ್ ಎಂದರೆ, ಕಯಾಕ್ ಅನ್ನು ಬಳಸಿ ನೀರಿನ ಮೇಲೆ ಪ್ರವಾಸ ಹೋಗುವುದು. ಇದೊಂದು ಜಲಕ್ರೀಡೆ ಕೂಡ ಹೌದು. ಈ ಕ್ರೀಡೆ ಕೇರಳ ರಾಜ್ಯದಲ್ಲಿ ಹೆಚ್ಚು ಜನಪ್ರಿಯ. ಪ್ಯಾಡ್ಲರ್‌ನ ಕುಳಿತುಕೊಳ್ಳುವ ಸ್ಥಾನ ಮತ್ತು ಪ್ಯಾಡಲ್‌ನಲ್ಲಿರುವ ಬ್ಲೇಡ್‌ಗಳ ಸಂಖ್ಯೆಯಿಂದ ಇದನ್ನು ಕ್ಯಾನೋಯಿಂಗ್‌ನಿಂದ ಪ್ರತ್ಯೇಕಿಸಲಾಗಿದೆ. ಹೆಚ್ಚಿನ ಕಯಾಕ್‌ಗಳು ಮುಚ್ಚಿದ ಡೆಕ್‌ಗಳನ್ನು ಹೊಂದಿವೆ. ಆದರಲ್ಲೂ ಸಿಟ್-ಆನ್-ಟಾಪ್ ಮತ್ತು ಗಾಳಿ ತುಂಬಿದ ಕಯಾಕ್‌ಗಳು ಜನಪ್ರಿಯತೆ ಗಳಿಸುತ್ತಿವೆ.