ಉಡುಪಿ: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ (85) ಅವರು ಇಂದು ಜಿಲ್ಲೆಯ ಅಂಬಲಪಾಡಿಯ ನಿವಾಸದಲ್ಲಿ ನಿಧನರಾಗಿದ್ದಾರೆ.
ಗೋವಿಂದಾಚಾರ್ಯರು (85 ವರ್ಷ) ಈ ನಾಡು, ದೇಶದ ಓರ್ವ ಧೀಮಂತ ಬಹುಶ್ರುತ ವಿದ್ವಾಂಸರು. ಪತ್ರಕರ್ತ, ಸಾಹಿತಿ, ಸಂಶೋಧಕ, ಅನುವಾದಕ, ಭಾಷಾಂತರಕಾರ, ಭಾಷ್ಯಕಾರ, ಕವಿ, ಪ್ರವಚನಕಾರ, ಉಪನ್ಯಾಸಕ ಹೀಗೆ ಬಹುವಿಧವಾಗಿ ಕಳೆದ ಸುಮಾರು 65 ವರ್ಷಗಳಿಂದ ತಮ್ಮ ಅಮೂಲ್ಯ ಕೊಡುಗೆಗಳನ್ನು ಧಾರೆಯೆರೆದವರು.
ಈ ನಿಟ್ಟಿನಲ್ಲಿ ಅವರ ಸಾಹಿತ್ಯಿಕ ತಪಸ್ಸು, ಸಾಹಸ, ಶ್ರದ್ಧೆ, ಪರಿಶ್ರಮ ಮತ್ತು ಕೊಡುಗೆಗಳು ನಿಸ್ಸಂಶಯವಾಗಿ ಬೆಲೆ ಕಟ್ಟಲಾಗದ್ದು. ಪ್ರಾಯಶಃ ಈ ನಾಡಿನಲ್ಲಿ ಕಳೆದೊಂದು ಶತಮಾನದಲ್ಲೇ ಸಂಸ್ಕೃತ ಮತ್ತು ಕನ್ನಡದ ಸಮನ್ವಯದ ಕೊಂಡಿಯಾಗಿ ಈ ವಿಶಾಲ ಆಯಾಮದಲ್ಲಿ ಸಾಹಿತ್ಯದ ಸೇವೆ ಸಲ್ಲಿಸಿದ ಮತ್ತೊಬ್ಬ ಸಾಹಿತಿ ಇಲ್ಲ. ದೇಶದ ಬೇರೆ ಯಾವ ಪ್ರಾದೇಶಿಕ ಭಾಷೆಯಲ್ಲೂ ಇಂಥಹ ವಿದ್ವಾಂಸರು ವಿರಳಾತಿವಿರಳ ಎನ್ನುವುದು ಅತಿಶಯದ ಮಾತಲ್ಲ.
ಓದಿ: ಪದ್ಮಶ್ರೀ ಪುರಸ್ಕೃತ ಬನ್ನಂಜೆ ಗೋವಿಂದಾಚಾರ್ಯ ಅಸ್ತಂಗತ
ಕೇವಲ ಸಂಸ್ಕೃತ ಭಾಷೆಯಲ್ಲೇ ಶ್ರೀಯುತ ಆಚಾರ್ಯರು ಸುಮಾರು 30ಕ್ಕೂ ಅಧಿಕ ಬೃಹತ್ ಗ್ರಂಥಗಳನ್ನು ರಚಿಸಿದ್ದಾರೆ ಎನ್ನುವುದೇ ವರ್ತಮಾನದಲ್ಲಿ ಅತ್ಯಂತ ಅಚ್ಚರಿಯ ಸಂಗತಿಯಾಗಿದೆ. ಕನ್ನಡ ಭಾಷೆಯ 130ಕ್ಕೂ ಅಧಿಕ ಕೃತಿರತ್ನಗಳು ಸೇರಿದಂತೆ ಈ ತನಕ 125ಕ್ಕೂ ಅಧಿಕ ಕೃತಿಗಳು ಪ್ರಕಾಶನಗೊಂಡು ಜ್ಞಾನಾಸಕ್ತರ ಅಪಾರ ಪ್ರಶಂಸೆಗೆ ಪಾತ್ರವಾಗಿವೆ. ಸುಮಾರು 45 ಗ್ರಂಥಗಳು ಪ್ರಕಾಶನಕ್ಕೆ ಬಾಕಿ ಇವೆ. ದೇಶದ ಪ್ರಾಚೀನ ಗ್ರಂಥಗಳಾದ ವೇದ ಉಪನಿಷತ್ತು, ಬ್ರಹ್ಮಸೂತ್ರ, ಮಹಾಭಾರತ, ರಾಮಾಯಣ, ಪುರಾಣಗಳ ಬಗ್ಗೆ ಆಚಾರ್ಯರು ನಡೆಸಿದ ಸಂಶೋಧನೆ, ರಚಿಸಿದ ಕೃತಿಗಳಿಂದಾಗಿ ಈ ವಿಷಯಗಳ ಬಗ್ಗೆ ಪ್ರಸ್ತುತ ದೇಶದಲ್ಲಿ ಅಧಿಕೃತವಾಗಿ ಮಾತನಾಡಬಲ್ಲ ಬಹು ವಿರಳ ವಿದ್ವಾಂಸರ ಪೈಕಿ ಪ್ರಮುಖರೆನಿಸಿದ್ದರು.
ಅವರ ಅನೇಕ ಕೃತಿಗಳು ಸಂಸ್ಕೃತ ಭಾಷೆಯ ಅಧ್ಯಯನಾಸಕ್ತರಿಗೆ ಆಕರ ಗ್ರಂಥಗಳಾಗಿವೆ. ಪ್ರವಚನಕಾರ ವಿದ್ವಾಂಸರಾಗಿ ಆಚಾರ್ಯರು ದೇಶ ವಿದೇಶಗಳಲ್ಲಿ ಸುಮಾರು 30,000 ಗಂಟೆಗಳಿಗೂ ಮಿಕ್ಕಿ ವಿದ್ವತ್ ಮಂಡನೆಗೈದಿದ್ದು ಲಕ್ಷಾಂತರ ಅಭಿಮಾನಿಗಳು ಹಾಗೂ ಶಿಷ್ಯರನ್ನು ಸಂಪಾದಿಸಿದ್ದಾರೆ. ಸುಮಾರು ಮೂರು ದಶಕಗಳ ಅವಧಿಗೆ ಕನ್ನಡದ ಪ್ರತಿಷ್ಠಿತ ಉದಯವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿ ಮತ್ತು ಸಂಪಾದಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇಂದಿಗೂ ದೇಶದ ಮತ್ತು ಅಮೆರಿಕ, ಆಸ್ಟ್ರೇಲಿಯಾ, ಯುರೋಪ್, ಇಂಡೋನೇಷ್ಯಾ, ರಷ್ಯಾ, ನೆದರ್ಲ್ಯಾಂಡ್, ಸ್ವಿಟ್ಸರ್ಲ್ಯಾಂಡ್ ಗ್ರೀಸ್ ಮೊದಲಾದ ದೇಶಗಳಿಂದ ವಿದ್ವಾಂಸರು ವಿದ್ಯಾರ್ಥಿಗಳು ಸಂಶೋಧನಾಸಕ್ತರು ಆಚಾರ್ಯರ ಬಳಿ ಬಂದು ಅಧ್ಯಯನಗೈದು ಸಂತೋಷದಿದ ತೆರಳಿದ್ದಾರೆ.
ಅಂಥವರಲ್ಲಿ ಅನೇಕರು ಕೊನೆಗೆ ತಮ್ಮ ಹೆಸರುಗಳನ್ನೂ ಬದಲಾಯಿಸಿಕೊಂಡು ಆಚಾರ್ಯರು ಸೂಚಿಸುವ ಭಾರತೀಯ ಹೆಸರನ್ನಿಟ್ಟುಕೊಂಡು ತೆರಳುತ್ತಿರುವುದು ಆಚಾರ್ಯರ ವಿದ್ವತ್ತಿನಲ್ಲಿ ಅವರಿಗಿರುವ ಶ್ರದ್ಧೆಯನ್ನು ತೋರಿಸುತ್ತದೆ. ಈ ಎಲ್ಲಾ ಸುಮೇರು ಸದೃಶ್ಯ ವಾಗ್ಮಯ ಸಾಧನೆಗಳು ಆಚಾರ್ಯರ ಸಾಹಿತ್ಯ ನಿಷ್ಠೆ ತಪಸ್ಸು ಶ್ರದ್ಧೆಗಳಿಗೆ ಸಾಕ್ಷಿಯಾಗಿವೆ. ಅವರ ಈ ಎಲ್ಲಾ ಸಾಧನೆಗಳಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವ ಪುರಸ್ಕಾರಗಳು ಸಂದಿವೆ.