ಉಡುಪಿ: ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮಾನವೀಯತೆಯನ್ನೇ ಮರೆತ ಹಣ್ಣಿನ ವ್ಯಾಪಾರಿಗಳು, ತಮ್ಮ ಜೊತೆಗಿದ್ದ ಸಂಗಡಿಗನೊಬ್ಬನನ್ನು ಮೃತಪಟ್ಟಿರುವ ಬಗ್ಗೆ ತಿಳಿಯದೇ ರಸ್ತೆ ಪಕ್ಕದಲ್ಲಿ ಕಸದಂತೆ ಎಸೆದು ಹೋಗಿದ್ದಾರೆ. ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನ ಸಂಗಡಿಗನನ್ನೇ ಕಸದಂತೆ ಎಸೆದು ತೆರಳಿರುವ ದೃಶ್ಯಗಳು ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿಯ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ಗ್ರಾಮದ ರಸ್ತೆಯೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು ಮನುಷ್ಯತ್ವವನ್ನು ನಾಚಿಸುವಂತಿದೆ. ಅಂದಾಜು 40 ವರ್ಷದ ವ್ಯಕ್ತಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಆತನ ಲಗೇಜ್ ಸಹಿತ ಆಟೋ ನಿಲ್ಲಿಸಿದ್ದ ಸಂಗಡಿಗರು, ಆತನ ಮೃತದೇಹವನ್ನು ವಾಹನದಿಂದ ತೆಗೆದು ರಸ್ತೆ ಬದಿ ಎಸೆದು ಯೂಟರ್ನ್ ಮಾಡಿಕೊಂಡು ಹೋಗಿರುವ ದೃಶ್ಯಗಳನ್ನು ಕಾಣ ಬಹುದಾಗಿದೆ.
ಹೊರ ಜಿಲ್ಲೆಯಿಂದ ಉಡುಪಿಯಲ್ಲಿ ಕಲ್ಲಂಗಡಿ ಮಾರಾಟ ಮಾಡಲು ಬಂದ ವ್ಯಾಪಾರಿಗಳಿಂದ ಈ ಅಮಾನವೀಯ ಕೆಲಸ ನಡೆದಿದೆ ಎಂದು ತಿಳಿದು ಬಂದಿದೆ. ರಸ್ತೆ ಬದಿ ಮೃತದೇಹವನ್ನು ಕಂಡ ಸಾಮಾಜಿಕ ಕಾರ್ಯಕರ್ತ ಈಶ್ವರ ಮಲ್ಪೆ ಅವರು ಮೃತ ವ್ಯಕ್ತಿಯ ಶವವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ. ಘಟನೆ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಈ ಬಗ್ಗೆ ದೂರು ದಾಖಲು ಮಾಡಿಕೊಂಡ ಮಲ್ಪೆ ಪೊಲೀಸರು ತನಿಖೆ ನಡೆಸಿದ್ದಾರೆ. ಮೃತ ವ್ಯಕ್ತಿ ಅನಾರೋಗ್ಯದಿಂದ ಬಳಲುತ್ತಿದ್ದ ಎಂಬ ಮಾಹಿತಿ ಇದ್ದು ಆತ ಮೃತಪಟ್ಟಿರುವ ಬಗ್ಗೆ ಗೊತ್ತಾಗದೇ ರಸ್ತೆ ಪಕ್ಕದಲ್ಲಿ ಎಸೆದಿದ್ದಾರೆ. ಆದರೆ, ಬಳಿಕ ವ್ಯಕ್ತಿ ಮೃತಟ್ಟಿರುವುದು ತಿಳಿದು ಬಂದಿದೆ.
ಇದನ್ನೂ ಓದಿ: ಬಜೆಟ್ 2023: ಶಂಕರ್ನಾಗ್ ಹೆಸರಲ್ಲಿ ಆಟೋ ನಿಲ್ದಾಣ.. ಮಿನಿ ಚಿತ್ರಮಂದಿರಗಳ ನಿರ್ಮಾಣ!