ಉಡುಪಿ: ರಾಜ್ಯದ ಇತಿಹಾಸದಲ್ಲಿ ಇವತ್ತು ಕರಾಳ ದಿನ. ಜನಾದೇಶಕ್ಕೆ, ಪ್ರಜಾಪ್ರಭುತ್ವಕ್ಕೆ, ರಾಜಕೀಯವಾಗಿ ಜನ್ಮಕೊಟ್ಟವರಿಗೆ ದ್ರೋಹ ಮಾಡಿದವರು, ಬಿಜೆಪಿಗೆ ತಮ್ಮನ್ನು ವ್ಯಾಪಾರ ಮಾಡಿಕೊಂಡವರು, ವಾಮಮಾರ್ಗದಲ್ಲಿ ಆಯ್ಕೆಯಾದ ಹತ್ತು ಶಾಸಕರನ್ನ ಮಂತ್ರಿಮಾಡಿದ್ದಾರೆ. ಇದು ಪ್ರಜಾಪ್ರಭುತ್ವದ ಅಣಕವಷ್ಟೇ ಅಲ್ಲ, ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಕಾಂಗ್ರೆಸ್ ಮುಖಂಡ ಉಗ್ರಪ್ಪ ಕಿಡಿಕಾರಿದ್ದಾರೆ.
ರಾಜ್ಯ ಮಂತ್ರಿ ಮಂಡಲ ವಿಸ್ತರಣೆ ವಿಚಾರವಾಗಿ ಮಾತನಾಡಿ ಉಗ್ರಪ್ಪ, ದ್ರೋಹ ಮಾಡಿದವರು ಮಂತ್ರಿಗಳಾಗಿದ್ದಾರೆ. ಇನ್ನಾದರೂ ಮತದಾರರಿಗೆ ಪಕ್ಷಕ್ಕೆ ನಿಷ್ಟರಾಗಿರಿ ಅಂತಾ ನೂತನ ಸಚಿವರಿಗೆ ಉಗ್ರಪ್ಪ ಕಿವಿಮಾತು ಹೇಳಿದರು. ಹಣದ ಹೊಳೆ, ಅಧಿಕಾರ ದುರ್ಬಳಕೆ ಮಾಡಿ ನೀವು ಗೆದ್ದದ್ದು ಗೊತ್ತಿದೆ. ಸೋತರೆ ರಾಜಕೀಯ ಯಾವುದೇ ಪಾರ್ಟಿ ನಿರ್ನಾಮ ಆಗೋದಿಲ್ಲ, ನಿಮಗೂ ಗೊತ್ತಿರಲಿ. ನಿಮ್ಮ ದಾಸ್ಯ ಪ್ರವೃತ್ತಿ ಪ್ರಮಾಣವಚನ ವೇಳೆ ಬಯಲಾಗಿದೆ. ಇನ್ನಾದರೂ ದಾಸ್ಯದ ಪ್ರವೃತ್ತಿ ಬಿಡಿ. ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಿ.ರಾಜ್ಯದ ಹಿತ ಕಾಪಾಡಲು ಕೇಂದ್ರದಿಂದ ಅನುದಾನ ತನ್ನಿ ಎಂದು ಬುದ್ದಿಮಾತು ಹೇಳಿದರು.
ವಿಜಯೇಂದ್ರ ಮನೆಯೇ ಬಿಜೆಪಿ ಶಕ್ತಿ ಕೇಂದ್ರ ವಿಚಾರವಾಗಿ ಮಾತನಾಡಿದ ಅವರು ವಂಶಪಾರಂಪರ್ಯ ಆಡಳಿತ ಅಂತ ನಮ್ಮ ಮೇಲೆ ಆರೋಪಿಸಿದ್ರಿ. ಯಡಿಯೂರಪ್ಪ ಮೂಲಕ ಒಂದು ಕುಟುಂಬದವರ ಆಡಳಿತ ನಡೆಯುತ್ತಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸ್ತಾ ಇದ್ದಾರೆ ಎಂದು ಎಚ್ಚರಿಕೆ ಕೊಟ್ಟರು.
ಸಂಸದ ಅನಂತ್ ಕುಮಾರ್ ಮಾನಸಿಕ ಸ್ಥಿಮಿತ ಕಳ್ಕೊಂಡಿದ್ದಾರೆ ಅವರಿಗೆ ಟ್ರೀಟ್‌ಮೆಂಟ್ ಕೊಡಿಸಿ ಸಂಸದ ಸ್ಥಾನದಿಂದ ವಜಾ ಮಾಡಿ. ಬಿಜೆಪಿಯೇ ಎಚ್ಚರಿಸಿದರೂ ಹೆಗಡೆ ಇನ್ನೂ ಕ್ಷಮೆ ಕೇಳಿಲ್ಲ. ದೇಶದ ಪರಂಪರೆ ಬಗ್ಗೆ, ಗಾಂಧೀಜಿ, ಅಂಬೇಡ್ಕರ್ ಬಗ್ಗೆ ಗೌರವ ಇಲ್ಲವೇ ?. ಇದ್ರೆ ಶಿಸ್ತು ಕ್ರಮಕೈಗೊಳ್ಳಿ. ಈ ವಿಷಯವನ್ನು ಪ್ರಧಾನಿ, ಸ್ಪೀಕರ್ ಗಮನದಲ್ಲಿಟ್ಟು ಅವರನ್ನು ಡಿಸ್ ಕ್ವಾಲಿಫೈ ಮಾಡಬೇಕು. ಅಲ್ಲದೆ ಅವರ ಮೇಲೆ ಸಂವಿಧಾನ ವಿರೋಧಿ ನಡೆಗಾಗಿ ಕೇಸು ದಾಖಲಿಸಬೇಕು ಎಂದು ಆಗ್ರಹಿಸಿದರು.