ಉಡುಪಿ: ಕರಾವಳಿಯ ಮೀನುಗಾರಿಕಾ ವಲಯದಲ್ಲಿ ಫಾರ್ಮಾಲಿನ್ ರಾಸಾಯನಿಕ ಭಾರೀ ಸುದ್ದಿಯಾಗುತ್ತಿದೆ. ಮೀನುಗಳು ಕೆಡದಂತೆ ಫಾರ್ಮಾಲಿನ್ ಬಳಕೆ ಮಾಡಿ ವ್ಯಾಪಾರ ಮಾಡುತ್ತಿರುವವರ ವಿರುದ್ಧ ಉಡುಪಿ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕರಾವಳಿಯಲ್ಲಿ ಮಾರಾಟವಾಗುತ್ತಿರುವ ಮೀನುಗಳು ಕೆಡದಂತೆ ಆರೋಗ್ಯಕ್ಕೆ ಹಾನಿಕಾರಕವಾದ ಫಾರ್ಮಾಲಿನ್ ರಾಸಾಯನಿಕ ಬಳಕೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದರಿಂದಾಗಿ ಮೀನು ಮಾಂಸ ಪ್ರಿಯರಿಗೆ ಆತಂಕ ಶುರುವಾಗಿದೆ.
ಮೊದಲು ಅಂಜಲ್ ಪಾಂಪ್ಲೆಟ್ ಮುಂತಾದ ದುಬಾರಿ ಮೀನುಗಳಿಗೆ ಫಾರ್ಮಾಲಿನ್ ಬೆರಕೆ ಮಾಡುತ್ತಿದ್ದರು. ಈಗ ಜನಸಾಮಾನ್ಯರು ನಿತ್ಯ ಬಳಕೆ ಮಾಡುವ ಚಟ್ಲಿ, ನಂಗು, ಬಂಗುಡೆ, ಕೊಡುವಾಯಿ ಮೀನುಗಳಲ್ಲೂ ಸಹ ಫಾರ್ಮಾಲಿನ್ ಬೆರಕೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಕೆಲ ನಿಷ್ಠಾವಂತ ವ್ಯಾಪಾರಸ್ಥರು ನಮ್ಮ ವ್ಯಾಪಾರಕ್ಕೆ ಹೊಡೆತ ಬೀಳುತ್ತಿದೆ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಎರಡು ವರ್ಷಗಳ ಹಿಂದೆ ಕೇರಳ, ಗೋವಾ ರಾಜ್ಯದವರು ಇದೇ ಕಾರಣಕ್ಕಾಗಿ ನಮ್ಮ ಕರಾವಳಿಯ ಮೀನುಗಳನ್ನು ನಿಷೇಧಿಸಿದ್ದರು. ಇದೀಗ ಮತ್ತೆ ಈ ದಂಧೆ ಸಕ್ರಿಯವಾಗಿದ್ದು, ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಾರ್ವಜನಿಕರು ದೂರು ನೀಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜಿಲ್ಲಾಡಳಿತ ಸಹ ಕ್ರಮಕ್ಕೆ ಮುಂದಾಗಿದ್ದು, ಫಾರ್ಮಾಲಿನ್ ಬಳಕೆ ಮಾಡಿ ಅಕ್ರಮವಾಗಿ ವ್ಯಾಪಾರದಲ್ಲಿ ತೊಡಗಿದ್ದವರ ವಿರುದ್ಧ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಕಾಯ್ದೆ 2006ರ ಅನ್ವಯ ಕಠಿಣ ಕ್ರಮ ಕೈಗೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ.