ಉಡುಪಿ : ನಾಳೆಯಿಂದ ಉಡುಪಿ ಕೊರೊನಾ ಸೋಂಕು ಮುಕ್ತ ಜಿಲ್ಲೆಯಾಗಲಿದೆ ಅಂತಾ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ. ಜಿಲ್ಲೆಯಲ್ಲಿ ಈತನಕ 3 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿತ್ತು. ಆ ಮೂವರಿಗ ಚಿಕಿತ್ಸೆ ನೀಡಲಾಗಿದೆ. ಅವರೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರನ್ನು ಸದ್ಯದಲ್ಲೇ ಡಿಸ್ಚಾರ್ಜ್ ಮಾಡಲಿದ್ದೇವೆ. ಇವರೊಂದಿಗೆ ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕ ಹೊಂದಿದ್ದ ಎಲ್ಲರ ವರದಿಯೂ ನೆಗೆಟಿವ್ ಎಂದು ಬಂದಿದೆ. ಹೀಗಾಗಿ ಜಿಲ್ಲೆಯಲ್ಲಿ ಕೊರೊನಾ ಆತಂಕ ದೂರವಾಗಿದೆ ಅಂತಾ ಜಿ. ಜಗದೀಶ್ ಹೇಳಿದ್ದಾರೆ.
ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಇಲ್ಲಿಗೆ ಬರುವವರಿಂದ ಆತಂಕ ಇದ್ದೇ ಇದೆ. ಹೀಗಾಗಿ ಹೊರ ರಾಜ್ಯದವರು ಮತ್ತು ಜಿಲ್ಲೆಯವರನ್ನು ಗಡಿಯೊಳಗೆ ಬಿಟ್ಟುಕೊಳ್ಳುವುದಿಲ್ಲ. ಉಡುಪಿಯಲ್ಲಿನ ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯ ಗಡಿಗಳು ಕಂಪ್ಲೀಟ್ ಸೀಲ್‌ಡೌನ್ ಆಗಲಿವೆ ಎಂದು ಡಿಸಿ ಜಿ ಜಗದೀಶ್ ಹೇಳಿದ್ದಾರೆ.
ಜಿಲ್ಲೆಯ ಐದೂ ಶಾಸಕರ ಜೊತೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು, ಉಡುಪಿ ಜಿಲ್ಲೆಯ ಕಡೆ ಹೊರಟಿರುವ ಹೊರ ಜಿಲ್ಲೆ, ಹೊರ ರಾಜ್ಯದ ವಾಹನಗಳನ್ನು ಒಳಗೆ ಬಿಡಲ್ಲ. ಹಾಗೇ ಜಿಲ್ಲೆಯೊಳಗೆ ಯಾರಿಗೂ ಪ್ರವೇಶವಿಲ್ಲ. ಜೊತೆಗೆ ಜಿಲ್ಲೆಯಿಂದ ಯಾರೂ ಹೊರಹೋಗುವಂತೆಯೂ ಇಲ್ಲ. ಯಾರ ಮೂಲಕ ಒತ್ತಡ ತಂದರೂ ಸೀಲ್ ಓಪನ್ ಮಾಡಲು ಸಾಧ್ಯವಿಲ್ಲ ಅಂತಾ ಖಡಕ್ ಸ್ಪಷ್ಟನೆ ನೀಡಿದ್ದಾರೆ.