ಉಡುಪಿ: ಉಡುಪಿಯನ್ನು ಒಂದು ತಿಂಗಳಲ್ಲಿ ಕೊರೊನಾ ಗ್ರೀನ್ ಜೋನ್ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿಂದು ಕೊರೊನಾ ತಡೆ ಹಾಗು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಭೆ ನಡೆಸಿದ ಬಳಿಕ ಸಚಿವ ಸುಧಾಕರ್ ಮಾತನಾಡಿದರು.
'ವಾರದೊಳಗೆ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆ ಲ್ಯಾಬ್ ಆರಂಭ':
ಕೊರೊನಾ ಸಂಬಂಧಪಟ್ಟಂತೆ 18ನೇ ಸ್ಥಾನದಲ್ಲಿದ್ದ ಉಡುಪಿಯಲ್ಲಿ ಕೊರೊನಾ ಮಹಾಸ್ಫೋಟಗೊಂಡಿದ್ದು ಸದ್ಯ ಮೊದಲ ಸ್ಥಾನಕ್ಕೆ ಬಂದಿದೆ. ಜಿಲ್ಲೆಯಲ್ಲಿ 64 ಜನ ಸೋಂಕು ಮುಕ್ತರಾಗಿದ್ದು, 9,022 ಮಾದರಿ ಪರೀಕ್ಷೆಗಳನ್ನು ಮಾಡಲಾಗಿದೆ. ಸೋಂಕಿತರ ಪೈಕಿ ಶೇ 98 ಜನರಿಗೆ ರೋಗ ಲಕ್ಷಣವಿಲ್ಲ. ವಾರದೊಳಗೆ ಇನ್ನೊಂದು ಲ್ಯಾಬ್ ಅನ್ನು ಜಿಲ್ಲಾಸ್ಪತ್ರೆಯಲ್ಲಿ ಆರಂಭಿಸುತ್ತೇವೆ. ಈ ಮೂಲಕ ದಿನಕ್ಕೆ 1,200 ಮಂದಿಯ ತಪಾಸಣೆಗೆ ಅವಕಾಶವಾಗಲಿದೆ ಎಂದು ವೈದ್ಯಕೀಯ ಸಚಿವರು ತಿಳಿಸಿದರು.
'ಮಹಾರಾಷ್ಟ್ರದಿಂದ ಬಂದವ್ರಿಗೆ 7 ದಿನ ಸಾಂಸ್ಥಿಕ 7 ದಿನ ಹೋಂ ಕ್ವಾರಂಟೈನ್':
ಮನುಷ್ಯ ವೈರಾಣು ವಿರುದ್ಧ ಗೆಲ್ಲಬೇಕು. ರಾಜ್ಯದಲ್ಲಿ 64 ಲ್ಯಾಬ್ ಕಾರ್ಯಾಚರಿಸುತ್ತಿದ್ದು ಯಾವುದೇ ಆತಂಕ ಬೇಡ. ಮಹಾರಾಷ್ಟ್ರದಿಂದ ಬಂದವರಿಗೆ 7 ದಿನ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುತ್ತಿದೆ. ಉಳಿದ 7 ದಿನ ಹೋಂ ಕ್ವಾರಂಟೈನ್ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿಸಿದರು.
'ಸೋಂಕಿತರ ಮಾಹಿತಿ ಕಲೆ ಹಾಕಲು ಟಾಸ್ಕ್ ಫೋರ್ಸ್ ರಚನೆ':
ಗ್ರಾಮಾಂತರ ಪ್ರದೇಶಗಳಲ್ಲಿ ಟಾಸ್ಕ್ ಫೋರ್ಸ್ ಕಮಿಟಿ ರಚನೆ ಮಾಡಲಾಗುತ್ತಿದೆ. ನಗರದ ವಾರ್ಡ್-ಬೂತ್ವಾರು ಟಾಸ್ಕ್ ಫೋರ್ಸ್ ರಚನೆ ಮಾಡಿ ಸೋಂಕಿತ ಹೊಸ ವ್ಯಕ್ತಿ ಬಂದಾಗ ವಿವರ ಸಂಗ್ರಹಿಸಲಾಗುವುದು. ರಾಜ್ಯದಲ್ಲಿ 10 ಲಕ್ಷ ಜನ ಸೋಂಕಿತರಾದರೂ ಕಟ್ಟೆಚ್ಚರ ವಹಿಸಬಹುದು. ಅಂತಹ ತಂತ್ರಜ್ಞಾನ ಸಿದ್ಧಪಡಿಸಿದ್ದೇವೆ. ವೈರಾಣುವಿನಿಂದ ದೂರವಿರಿ. ವ್ಯಕ್ತಿಗಳಿಂದಲ್ಲ ಎಂದು ಸಚಿವ ಸುಧಾಕರ್ ತಿಳಿಸಿದರು.
'ಎನ್-95 ಮಾಸ್ಕ್ ಧರಿಸಿದ್ರೆ ಉಸಿರಾಟದ ಸಮಸ್ಯೆ':
ಸುಪ್ರೀಂಕೋರ್ಟ್ ಆದೇಶ ಅನುನರಿಸುತ್ತೇವೆ. ಆಯಾ ರಾಜ್ಯದವರು ಆ ರಾಜ್ಯಕ್ಕೆ ಬಿಟ್ಟುಕೊಳ್ಳಬೇಕಾಗುತ್ತದೆ. ನಿರಂತರ ಮಾಸ್ಕ್ ಹಾಕಿದ್ರೆ ಅಪಾಯವೇನಿಲ್ಲ. ಎನ್-95 ಮಾಸ್ಕ್ ಧರಿಸಿದ್ರೆ ಉಸಿರಾಟದ ಸಮಸ್ಯೆ ಆಗುತ್ತದೆ. ಮಾಮೂಲಿ ಮಾಸ್ಕ್ ಧರಿಸಿ, ಯಾವುದೇ ಅಪಾಯ ಇಲ್ಲ ಎಂದರು.
'ಮಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಸೂಚಿ':
ಇನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ಬೆಂಗಳೂರು ಮಾರ್ಗಸೂಚಿ ಮಂಗಳೂರಿಗೂ ಅನ್ವಯವಾಗಲಿದೆ. ಕೆಲ ಬದಲಾವಣೆ ಮಾಡಿ ತಕ್ಷಣ ಮಾರ್ಗಸೂಚಿ ಹೊರಡಿಸುತ್ತೇವೆ. ವಿಮಾನ ಮೂಲಕ ಬರುವವರು ಮೊದಲೇ ರಿಜಿಸ್ಟರ್ ಮಾಡಬೇಕು. ಐಸಿಎಂಆರ್ ಗೈಡ್‌ಲೈನ್ ಫಾಲೋ ಮಾಡಬೇಕು. ಬರುವ 48 ಗಂಟೆಯೊಳಗೆ ಕೊರೊನಾ ಟೆಸ್ಟ್ ನೆಗೆಟಿವ್ ವರದಿ ತರಬೇಕು. ಈ ಕಾನೂನನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿಯೂ ಜಾರಿಗೆ ತರುತ್ತೇವೆ ಎಂದರು.
'ಕಂಟೇನ್ಮೆಂಟ್ ಝೋನ್ನ ಡೆಫಿನಿಶನ್ ಬದಲಾಗಿದೆ':
ಸಾಂಸ್ಥಿಕ ಕ್ವಾರಂಟೈನ್ ಅವಧಿ 7 ದಿನಕ್ಕೆ ಮೊಟಕು ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಸಚಿವರು, ಸಾವಿರಾರು ಜನರನ್ನು ಕ್ವಾರಂಟೈನ್ ಮಾಡೋದು ಕಷ್ಟ. ಕಂಟೇನ್ಮೆಂಟ್ ಝೋನ್ನ ಡೆಫಿನಿಶನ್ ಬದಲಾಗಿದೆ. ಆರಂಭದಲ್ಲಿ ಒಂದು ಕಿ.ಮೀ ಕಂಟೇನ್ಮೆಂಟ್ ಮಾಡಿದ್ದೆವು. ಈಗ ನೂರು ಮೀಟರ್ ಕಂಟೇನ್ಮೆಂಟ್ ಮಾಡ್ತಿದ್ದೇವೆ. ಸೋಂಕಿತನ ಮನೆಯ ಬೀದಿಯನ್ನು ಮಾತ್ರ ಕಂಟೇನ್ಮೆಂಟ್ ಮಾಡುತ್ತಿದ್ದೇವೆ. ಸೋಂಕಿತನ ಮನೆಯನ್ನು ಮಾತ್ರ ಸೀಲ್ ಮಾಡುವ ಪ್ರಸ್ತಾಪವಿದೆ. ಆ ಮನೆಗೆ ಅಗತ್ಯ ವಸ್ತುವನ್ನು ಸರ್ಕಾರವೇ ಒದಗಿಸುತ್ತದೆ ಎಂದು ಸಚಿವ ಡಾ. ಸುಧಾಕರ್ ಸ್ಪಷ್ಟಪಡಿಸಿದರು.