ಉಡುಪಿ: ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ, ಸದ್ಯ ಕೋವಿಡ್-19ನಿಂದ ಬಳಲುತ್ತಿದ್ದಾರೆ. ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸ್ವಾಮೀಜಿ ವಿಶ್ರಾಂತಿಯ ಜೊತೆಗೆ ನಿರಂತರ ಅನುಷ್ಠಾನಗಳಲ್ಲಿ ತೊಡಗಿಕೊಂಡಿದ್ದಾರೆ.
ಅಷ್ಟಮಠದ ಯತಿಗಳು ತಮ್ಮ ಯತಿಧರ್ಮದ ಪಾಲನೆಗೆ ವಿಶೇಷ ಒತ್ತು ನೀಡುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೂ ನಿತ್ಯ ಜಪ ಅನುಷ್ಠಾನಗಳಲ್ಲಿ ಪುತ್ತಿಗೆ ಶ್ರೀಗಳು ತೊಡಗಿಸಿಕೊಂಡಿರುವುದು ಗಮನಸೆಳೆದಿದೆ. ಉಡುಪಿ ಮಾತ್ರವಲ್ಲ ಅಮೆರಿಕಾ ಸೇರಿ ಹಲವಾರು ದೇಶಗಳಲ್ಲಿ ತಮ್ಮ ಶಾಖಾಮಠಗಳನ್ನು ಹೊಂದಿರುವ ಸ್ವಾಮೀಜಿ ಈ ಬಾರಿ ಉಡುಪಿಯಲ್ಲೇ ಚಾತುರ್ಮಾಸ ವ್ರತ ಕೈಗೊಂಡಿದ್ದರು.
ವ್ರತಸ್ಥರಾಗಿದ್ದ ವೇಳೆ ಅವರಲ್ಲಿ ಜ್ವರ ಮತ್ತು ಶೀತದ ಲಕ್ಷಣಗಳು ಕಂಡು ಬಂದಿದ್ದು ಪರೀಕ್ಷೆಗೊಳಗಾಗಿದ್ದರು. ಪಾಸಿಟಿವ್ ಬಂದ ಬಳಿಕ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಚಿಕಿತ್ಸೆಯ ವೇಳೆ ಸ್ವಾಮೀಜಿ ಪೂಜೆ ಜಪ ಅನುಷ್ಠಾನಗಳಲ್ಲಿ ತೊಡಗಿರುವ ಫೋಟೋ ಭಕ್ತರಿಗೆ ಕೊಂಚ ನೆಮ್ಮದಿ ನೀಡಿದೆ. ಶ್ರೀಗಳು ಬೇಗ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿ ಎಂದು ಭಕ್ತರು ಹಾರೈಸುತ್ತಿದ್ದಾರೆ.