ಉಡುಪಿ : ದೋಣಿ ದುರಂತದಲ್ಲಿ ಕಾಣೆಯಾಗಿರುವ ಮೀನುಗಾರರ ರಕ್ಷಣಾ ಕಾರ್ಯ ಮುಂದುವರೆದಿದೆ. ಕಡಲಿನ ಪ್ರಕ್ಷುಬ್ಧ ವಾತಾವರಣ ಮತ್ತು ವಿಪರೀತ ಮಳೆ ಕಾರ್ಯಾಚರಣೆಗೆ ಅಡ್ಡಿ ಪಡಿಸುತ್ತಿದೆ.
ಬೈಂದೂರಿನ ಕೊಡೇರಿ ಪರಿಸರದಲ್ಲಿ ನಡೆದ ದುರ್ಘಟನೆ ಇದು ಮೊದಲಲ್ಲ. ಈ ಹಿಂದೆಯೂ ಇಂಥದ್ದೇ ನಾಲ್ಕೈದು ದೋಣಿಗಳು ಇಲ್ಲಿ ಅಪಘಾತಕ್ಕೀಡಾಗಿದ್ದವು. ಆದರೆ ಈ ಬಾರಿ ನಡೆದ ದುರಂತ ಮಾತ್ರ ನಾಲ್ವರ ಪ್ರಾಣವನ್ನು ಕಸಿದುಕೊಂಡಿದೆ.
ಇದನ್ನೂ ಓದಿ: ಉಡುಪಿ ಸಮುದ್ರದಲ್ಲಿ ನಾಡದೋಣಿ ದುರಂತ: ನಾಲ್ವರು ಮೀನುಗಾರರು ಕಣ್ಮರೆ
ಸ್ಥಳೀಯ ಮೀನುಗಾರರ ಜೊತೆಗೆ ಕರಾವಳಿ ಕಾವಲು ಪಡೆ ಮತ್ತಿತರ ರಕ್ಷಣಾ ಕಾರ್ಯಕರ್ತರು ಕಡಲಿಗಿಳಿದು ಶೋಧ ನಡೆಸುತ್ತಿದ್ದಾರೆ. ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಮೀನುಗಾರರಿಗೆ ಧೈರ್ಯ ತುಂಬಿದ್ದಾರೆ.
![Udupi boat tragedy rescue operation going on](https://etvbharatimages.akamaized.net/etvbharat/prod-images/kn-udp-06-16-doni-durantha-update-pkg-7202200-dc-bytemp4_16082020201042_1608f_1597588842_975.jpg)
ಕಾಣೆಯಾದ ನಾಲ್ವರಲ್ಲಿ ಇಬ್ಬರು ಬಲೆಗೆ ಸಿಲುಕಿದ ಕಾರಣ ಈಜಲಾಗದೆ ಸಿಕ್ಕಿಹಾಕಿಕೊಂಡಿರುವ ಸಾಧ್ಯತೆ ಇದೆ. ಇವರಿಬ್ಬರ ದೇಹ ಬಲೆಯಲ್ಲೇ ಸಿಲುಕಿದೆ ಎನ್ನಲಾಗುತ್ತಿದ್ದು, ಮೇಲಕ್ಕೆತ್ತಲು ಹರಸಾಹಸಪಡುತ್ತಿದ್ದಾರೆ. ಇನ್ನುಳಿದ ಇಬ್ಬರಿಗಾಗಿ ಶೋಧಕಾರ್ಯ ಮುಂದುವರೆದಿದೆ.