ಉಡುಪಿ: ಕಿರಿಮಂಜೇಶ್ವರ ಸಮೀಪದ ಕೊಡೇರಿಯಲ್ಲಿ ದೋಣಿ ದುರಂತ ಸಂಭವಿಸಿದೆ. ಪರಿಣಾಮ, ನಾಲ್ಕು ಮಂದಿ ಮೀನುಗಾರರು ಕಣ್ಮರೆಯಾಗಿದ್ದಾರೆ. ಕುಂದಾಪುರ ತಾಲೂಕಿನ ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇಂದು ಮುಂಜಾನೆ ಸಾಗರಶ್ರೀ ಎಂಬ ನಾಡದೋಣಿಯಲ್ಲಿ 11 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಸಮುದ್ರದಿಂದ ವಾಪಸಾಗುವ ವೇಳೆ ಅಲೆಗಳ ತೀವ್ರತೆಗೆ ನಾಡದೋಣಿ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣ ಹಾನಿಯಾಗಿ ಹನ್ನೊಂದು ಮಂದಿ ಮೀನುಗಾರರ ಪೈಕಿ ನಾಲ್ವರು ಕಾಣೆಯಾಗಿದ್ದಾರೆ. ಸದ್ಯ ಮೀನುಗಾರರಿಗೆ ಶೋಧ ಕಾರ್ಯ ನಡೆಯುತ್ತಿದೆ.
ನಾಗ ಕಾರ್ವಿ (55), ಶೇಖರ ಕಾರ್ವಿ, ಮಂಜುನಾಥ ಕಾರ್ವಿ ಹಾಗು ಲಕ್ಷ್ಮಣ ಕಾರ್ವಿ ನಾಪತ್ತೆಯಾಗಿರುವ ಮೀನುಗಾರರಾಗಿದ್ದಾರೆ.
ಬದುಕುಳಿದು ಬಂದ 7 ಮಂದಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಿದ್ದಾರೆ. ಉಳಿದ ನಾಲ್ವರಲ್ಲಿ ಇಬ್ಬರು ಮೀನುಗಾರರು, ನೀರಿನೊಳಗೆ ಬಲೆಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.
ಬಲೆಯಲ್ಲಿ ಸಿಲುಕಿದವರನ್ನು ರಕ್ಷಿಸಲು ಕಾರ್ಯಾಚರಣೆ ನಡೆಯುತ್ತಿದೆ. ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗಿರುವ ಕಾರಣ ಕಾರ್ಯಾಚರಣೆ ತೊಡಕಾಗುತ್ತಿದೆ.