ಉಡುಪಿ: ಮಂಗಳೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪತ್ರಕರ್ತರ ಸಮಾವೇಶಕ್ಕೆ ತೆರಳುತ್ತಿದ್ದ ಉತ್ತರ ಕರ್ನಾಟಕ ಭಾಗದ ಪತ್ರಕರ್ತರ ಮೇಲೆ ಟೋಲ್ ಗೇಟ್ ಸಿಬ್ಬಂದಿ ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿ ಬಂದಿದೆ.
ಉಡುಪಿ ಮೂಲಕ ಮಂಗಳೂರಿಗೆ ತೆರಳುತ್ತಿದ್ದ ವಿಜಯಪುರ, ಬಾಗಲಕೋಟೆ ಭಾಗದ ಪತ್ರಕರ್ತರು ಟೋಲ್ ಸಿಬ್ಬಂದಿಯ ಅನುಚಿತ ವರ್ತನೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಟೋಲ್ಗಳಲ್ಲಿ ಪತ್ರಕರ್ತರ ಸಂಚಾರಕ್ಕೆ ವಿನಾಯಿತಿ ಇದ್ದು, ತಮಗೂ ಇದರ ಪ್ರಯೋಜನ ನೀಡುವಂತೆ ಈ ಪತ್ರಕರ್ತರು ಸಿಬ್ಬಂದಿಯಲ್ಲಿ ಕೇಳಿದ್ದರು. ಮೊದಲು ಇದಕ್ಕೆ ಒಪ್ಪಿ ನಂತರ ಟೋಲ್ ಸಿಬ್ಬಂದಿ ಏಕಾಏಕಿ ಪತ್ರಕರ್ತರನ್ನು ದಬಾಯಿಸಲು ಆರಂಭಿಸಿದ್ದಾರೆ ಎನ್ನಲಾಗಿದೆ.
ಪತ್ರಕರ್ತರ ಮೇಲೆ ಹಲ್ಲೆ ಮಾಡಲು ಬಂದಾಗ ಆಕ್ರೋಶಗೊಂಡು ಟೋಲ್ ಸಿಬ್ಬಂದಿ ವರ್ತನೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೇರವಾಗಿ ಹಣ ಕೇಳಿದ್ದರೆ ನೀಡಲು ನಾವು ಸಿದ್ಧರಿದ್ದೇವೆ. ಆದರೆ ವಿನಾಯಿತಿ ನೀಡುವುದಾಗಿ ಹೇಳಿ ಅನುಚಿತವಾಗಿ ವರ್ತಿಸುವುದು ಸರಿಯಲ್ಲ ಎಂದು ಪತ್ರಕರ್ತರು ಹೇಳಿದ್ದಾರೆ.