ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನ ಇಡೂರು ಕುಂಜ್ವಾಡಿ ಗ್ರಾಮದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಭೂಮಿಕಾ ಮತ್ತು 9ನೇ ತರಗತಿ ವಿದ್ಯಾರ್ಥಿ ಭರತ್ ಮನೆಯಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇದೆ. ಹೀಗಾಗಿ ಮೂಕಾಂಬಿಕಾ ಅಭಯಾರಣ್ಯದ ತಪ್ಪಲಿನಲ್ಲಿ ಇರುವ ತಮ್ಮ ಮನೆಯಿಂದ 300 ಮೀಟರ್ ದೂರದ ಗುಡ್ಡ ಏರಿ ಆನ್‌ಲೈನ್ ಶಿಕ್ಷಣದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.
ಭೂಮಿಕಾ ಹಾಗೂ ಭರತ್ ಇಬ್ಬರೂ ಕುಂಜ್ಞಾಡಿ ಸರ್ಕಾರಿ ಶಾಲೆಯಲ್ಲಿ 5 ನೇ ತರಗತಿಯಲ್ಲಿ ಕಲಿಯುತ್ತಿರುವಾಗ ಇಬ್ಬರೂ ನವೋದಯ ಶಾಲೆಗೆ ಪರೀಕ್ಷೆ ಬರೆದು ಪ್ರವೇಶ ಗಿಟ್ಟಿಸಿಕೊಂಡಿದ್ದರು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಸಹಕಾರಿಯಾಗಿದ್ದು, ಬೆಟ್ಟದ ಮೇಲೆ ಮಕ್ಕಳಿಗೆ ತೊಂದರೆ ಆಗಬಾರದು ಎಂದು ಸಣ್ಣ ಚಪ್ಪರ ನಿರ್ಮಿಸಿದ್ದಾರೆ.
ಅಲ್ಲದೇ ದಟ್ಟ ಅರಣ್ಯ ಇರುವ ಕಾರಣ ಮಕ್ಕಳು ಗುಡ್ಡ ಏರಿ ಆನ್‌ಲೈನ್ ತರಗತಿ ಮುಗಿಸಿ ಬರುವವರೆಗೂ ತಂದೆ-ತಾಯಿ ಕಾದು ಕುಳಿತಿದ್ದಾರೆ. ಪ್ರತಿದಿನ ಬೆಳಿಗ್ಗೆ 9ಕ್ಕೆ ಮೊಬೈಲ್, ಚಾರ್ಜರ್, ಪುಸ್ತಕ ಹಾಗೂ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಬ್ಯಾಟರಿಯನ್ನೂ ಗುಡ್ಡಕ್ಕೆ ತೆಗೆದುಕೊಂಡು ಹೋಗುವ ಮಕ್ಕಳು ಮಧ್ಯಾಹ್ನದವರೆಗೂ ಅಲ್ಲಿಯೇ ಪಾಠ ಕೇಳಿ ನಂತರ ಮನೆಗೆ ಮರಳುತ್ತಾರೆ.
ವಿದ್ಯಾರ್ಥಿಗಳ ಪೋಷಕರು ಬಡ ಕುಟುಂಬದವರಾಗಿದ್ದು, ಮಕ್ಕಳು ಆನ್‌ಲೈನ್ ಶಿಕ್ಷಣಕ್ಕಾಗಿ 50 ಸಾವಿರ ರೂ ಸಾಲ ಪಡೆದು ಮೊಬೈಲ್ ತಂದು ಕೊಟ್ಟಿದ್ದಾರೆ. ಈಗ ನೆಟ್ವರ್ಕ್ ಸಮಸ್ಯೆ ಕಾಡುತ್ತಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ವಿದ್ಯಾರ್ಥಿಗಳ ಸಮಸ್ಯೆಗೆ ನೆರವಾಗಬೇಕು ಎಂಬುದು ಗ್ರಾಮಸ್ಥರ ಒತ್ತಾಯವಾಗಿದೆ.