ಉಡುಪಿ: ಸಿದ್ದರಾಮಯ್ಯಗೆ ಗೋವಿನ ಶಾಪವಿದೆ. ಶಾಪ ನಿವಾರಣೆಗೆ ಸಲಹೆ ಕೊಡಬಹುದಿತ್ತು. ಆದರೆ ಅವರು ಯಾರ ಮಾತನ್ನು ಕೇಳ್ತಾರೆ ಹೇಳಿ?, ಅವರಿಗೆ ಪುಕ್ಸಟ್ಟೆ ಸಲಹೆ ಕೊಡಲೇನು? ಎಂದು ಸಚಿವ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ. ಅಧಿಕಾರ ಸಿಗದಿದ್ದರೆ ಪಕ್ಷ ತೊರೆದು ಬೇರೆ ಪಕ್ಷ ಕಟ್ಟುತ್ತಾರೆ. ಗೋವು ರಕ್ಷಣೆ ಬಗ್ಗೆ ಮೇಲ್ಮನೆ ಪ್ರತಿಪಕ್ಷ ನಾಯಕರಾಗಿದ್ದಾಗ ನಾನು ಹಲವು ಸಲಹೆ ಕೊಟ್ಟಿದ್ದೆ. ನನ್ನ ಮಾತನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಗೋ ಹತ್ಯೆ, ಗೋಕಳ್ಳತನ ತಡೆಯುವ ಯಾವ ಕ್ರಮ ಕೈಗೊಳ್ಳುತ್ತೀರಿ ಎಂದು ಕೇಳಿದ್ದಕ್ಕೆ ನೀವು ಕೋಮುವಾದಿಗಳು ನಿಮ್ಮ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.
ಹೀಗಾಗಿ ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಗೋ ಶಾಪ ಇದೆ. ಕಾಂಗ್ರೆಸ್ ಈ ಜನ್ಮದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಸಿದ್ದರಾಮಯ್ಯಗೆ ಮತ್ತೆ ಅಧಿಕಾರ ಸಿಗಲ್ಲ ಎಂದು ಈಶ್ವರಪ್ಪ ಭವಿಷ್ಯ ನುಡಿದರು. ಸಿದ್ದರಾಮಯ್ಯ ಗೋಮಾಂಸ ತಿಂತೇನೆ ಎಂದರೂ ಕಾಂಗ್ರೆಸ್ನವರು ವಿರೋಧಿಸುವುದಿಲ್ಲ. ಪಾಕಿಸ್ತಾನ ಜಿಂದಾಬಾದ್ ಎನ್ನುವವರ ವಿರುದ್ಧವೂ ಅವರು ಮಾತನಾಡುವುದಿಲ್ಲ. ಕಾಂಗ್ರೆಸ್ನವರು ಮೊದಲು ಅವರ ಮನಸ್ಥಿತಿ ಬದಲಾವಣೆ ಮಾಡಿಕೊಳ್ಳಬೇಕು ಎಂದರು.
ಓದಿ:ಜಿಪಂ ಅಭಿವೃದ್ಧಿ ಕಾರ್ಯಗಳ ಹಿನ್ನಡೆಗೆ ಸಿಎಂ ಅಸಮಾಧಾನ: ಇಬ್ಬರು ಅಧಿಕಾರಿಗಳ ಅಮಾನತಿಗೆ ಸೂಚನೆ
ಪಾಕಿಸ್ತಾನ ಪರ ಘೋಷಣೆ ಕೂಗಿದವರ ಸೊಕ್ಕು ಮುರಿಯುತ್ತೇವೆ. ಇಂತಹ ದೇಶದ್ರೋಹಿ ಚಟುವಟಿಕೆಯನ್ನು ವಿರೋಧ ಮಾಡುವ ಶಕ್ತಿ ಕಾಂಗ್ರೆಸ್‌ಗೆ ಇಲ್ಲವಾಗಿದೆ. ದೇಶದಲ್ಲಿರುವ ಎಲ್ಲ ಮುಸ್ಲಿಂರು ರಾಷ್ಟ್ರದ್ರೋಹಿಗಳಲ್ಲ. ನಾನು ಇವತ್ತೂ ಹೇಳುತ್ತಿದ್ದೇನೆ ದೇಶದ್ರೋಹಿಗಳ ಮತ ನಮ್ಮ ಪಕ್ಷಕ್ಕೆ ಬೇಡ. ಕಾಂಗ್ರೆಸ್ ಇದೇ ಮನಸ್ಥಿತಿಯಲ್ಲಿದ್ದಾರೆ, ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯನ್ನು ಗೆಲ್ಲಲು ಸಹ ಸಾಧ್ಯವಿಲ್ಲ ಎಂದು ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.