ಉಡುಪಿ: ಕಾಲಿಲ್ಲದಿದ್ದರೂ ಇಲ್ಲೊಬ್ಬ ಯುವತಿಯ ಕಲ್ಯಾಣಕ್ಕೆ ಕಾಲ ಕೂಡಿ ಬಂದಿದೆ. ಕಾಲುಗಳೆರಡು ಬಲಹೀನವಾದರೂ ಈ ಯುವತಿಯ ಅದೃಷ್ಟಬಲ ಮಾತ್ರ ಚೆನ್ನಾಗಿದೆ. ದುಬೈನಲ್ಲಿ ಉದ್ಯೋಗ ಮಾಡುತ್ತಿರುವ ಯುವಕ ತಾನೇ ಮುಂದೆ ಬಂದು ಇವಳ ಬಾಳಿಗೆ ಬೆಳಕಾಗಿದ್ದಾನೆ.
ಮಾನವೀಯತೆ ಇನ್ನೂ ಸತ್ತಿಲ್ಲ ಅನ್ನೋದಕ್ಕೆ ಉಡುಪಿಯಲ್ಲಿ ನಡೆದ ಈ ಮದುವೆಯೇ ಸಾಕ್ಷಿ. ಪೋಲಿಯೋಗೆ ತುತ್ತಾಗಿ ಎರಡೂ ಕಾಲುಗಳಲ್ಲಿ ಈಕೆ ಬಲ ಕಳೆದುಕೊಂಡಿದ್ದಾಳೆ. ಪಿಯುಸಿವರೆಗೆ ಓದಿಕೊಂಡು ತಂದೆ-ತಾಯಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸುನೀತಾ, ತನ್ನ ಕಾಲಿನಂತೆ ಬದುಕು ಕೂಡ ನಿರ್ಧಾರವಾಗುತ್ತೆ ಎಂದು ಖಿನ್ನತೆಗೆ ಜಾರಿದ್ದಳು. ಆದರೆ ಕಾಲು ಕಿತ್ತುಕೊಂಡು ಕಷ್ಟ ಕೊಟ್ಟ ದೇವರು ಮದುವೆಯ ವಿಚಾರದಲ್ಲಿ ಈಕೆಯ ಭಾಗ್ಯದ ಬಾಗಿಲು ತೆರೆದಿದ್ದಾನೆ. ದುಬೈನ ಆಯಿಲ್ ಕಂಪನಿಯಲ್ಲಿ ಉದ್ಯೋಗ ಮಾಡುವ ಸಂದೀಪ್ ತಾನೇ ಮುಂದೆ ಬಂದು ಈಕೆಯ ಜೀವನ ಪಯಣಕ್ಕೆ ಆಧಾರವಾಗಲು ನಿರ್ಧರಿಸಿದ್ದಾರೆ. ಮನೆಯವರ ಒಪ್ಪಿಗೆಯಂತೆ ಇವತ್ತು ಈ ಅಪರೂಪದ ಮದುವೆಗೆ ಉಡುಪಿಯ ಕರಂಬಳ್ಳಿ ದೇವಸ್ಥಾನ ಸಾಕ್ಷಿಯಾಯ್ತು.
ಆತುರದ ನಿರ್ಧಾರ ತೆಗೆದುಕೊಳ್ಳೋದು ಸುಲಭ. ಆದರೆ ಜೀವನವಿಡೀ ನಿಭಾಯಿಸುವುದು ಕಷ್ಟ. ಆದರೆ ಈ ಜೋಡಿಯ ವಿಚಾರದಲ್ಲಿ ಹಾಗಾಗುವುದಿಲ್ಲ ಅನ್ನೋದು ಮನೆಯವರ ಅಭಿಪ್ರಾಯ. ಇಂತಹ ಹುಡುಗಿಗೆ ಬಾಳು ನೀಡಬೇಕೆಂದು ಮೊದಲೇ ನಿರ್ಧರಿಸಿದ್ದ ಸಂದೀಪ್, ಸಂಬಂಧಿಕರ ಮೂಲಕ ಈ ಯುವತಿಯ ಬಗ್ಗೆ ವಿಚಾರಿಸಿ ತಾನೇ ಮುಂದೆ ಬಂದು ವಿವಾಹವಾಗಿದ್ದಾರೆ.
ಇನ್ನೇನು ಮನೆ ಮಗಳ ಬಾಳು ನರಕವಾಯ್ತು ಎಂದು ದಿನವೂ ಕೊರಗುತ್ತಿದ್ದ ಸುನೀತಾ ಕುಟುಂಬದವರಿಗೆ ಜಗತ್ತಿನ ಭಾರವೆಲ್ಲಾ ಹಗುರಾದಷ್ಟು ಸಂತೋಷ, ಮದುವೆ ಮುಗಿಯುವವರೆಗೂ ಆನಂದ ಬಾಷ್ಪ ಸುರಿಸಿ ಪ್ರೀತಿಯ ಮಗಳನ್ನು ಬೀಳ್ಕೊಟ್ಟಿದ್ದಾರೆ.