ಉಡುಪಿ: ಕೊಂಕಣ ರೈಲ್ವೆಯಲ್ಲಿ ಕೆಲಸ ಕೊಡಿಸೋದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿ ಜೈಲುಪಾಲಾಗಿದ್ದಾನೆ. ಉಡುಪಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಗಣೇಶ್ ನಾಯ್ಕ್ ಎಂಬಾತ ಬಂಧಿಯಾದ ಆರೋಪಿ.
ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಆಗಿರುವ, ಮಥಾಯಿಸ್ ಅವರಿಗೆ ತಾನು ಕೊಂಕಣ ರೈಲ್ವೆ ಇಲಾಖೆಯಲ್ಲಿ ಟಿಸಿ ಆಗಿರುವುದಾಗಿ ಹೇಳಿ ಉದ್ಯೋಗ ಕೊಡುವುದಾಗಿ ನಂಬಿಸಿದ್ದ.
ಅವರಿಂದ ₹20 ಸಾವಿರ ಹಣ ಹಾಗೂ ದಾಖಲೆ ಪತ್ರಗಳನ್ನು ತೆಗೆದುಕೊಂಡಿದ್ದ. ಪರ್ಕಳದ ವನಿತಾ ಎಂಬುವರಿಂದಲೂ ಹಣ ಪಡೆದು, ನಕಲಿ ನೇಮಕಾತಿ ಪತ್ರವನ್ನು ನೀಡಿ, ಉದ್ಯೋಗ ಕೊಡಿಸದೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿ ಗಣೇಶ್ ನಾಯ್ಕ್ ಇದೇ ರೀತಿ ಕೆಲಸ ಮಾಡಿಸಿಕೊಡುವುದಾಗಿ ಹೇಳಿ ಉಡುಪಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳಲ್ಲಿ ಸಾರ್ವಜನಿಕರನ್ನು ನಂಬಿಸಿ ಅವರ ಬಳಿ ಹಣ ಮತ್ತು ದಾಖಲಾತಿ ಪಡೆದುಕೊಂಡು ವಂಚಿಸಿರುವುದು ಬೆಳಕಿಗೆ ಬಂದಿದೆ.
ರೈಲ್ವೆ ಪೊಲೀಸರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಿದ ಉಡುಪಿ ನಗರ ಪೊಲೀಸರು ಕೊನೆಗೂ ಗಣೇಶ್ ನಾಯ್ಕ್ನನ್ನು ಬಂಧಿಸಿದ್ದಾರೆ.