ಉಡುಪಿ : ಉಡುಪಿಯಲ್ಲಿ ಹಿಜಾಬ್ ಹೋರಾಟಗಾರ್ತಿಯರ ಕೊನೆಯ ಹಂತದ ಹೋರಾಟ ಮುಂದುವರಿದಿದೆ. ವಿದ್ಯೋದಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಹಠ ಹಿಡಿದು ವಾಗ್ವಾದ ನಡೆಸಿದ್ದಾರೆ. ಉಡುಪಿ ತಹಶೀಲ್ದಾರ್ ಅರ್ಚನಾ ಭಟ್ ಹಾಗೂ ಉಡುಪಿ ನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಮನವೊಲಿಸಲು ನಡೆಸಿದ ಪ್ರಯತ್ನವೂ ವಿಫಲವಾಗಿದೆ.
ವಿದ್ಯೋದಯ ಪದವಿ ಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿನಿಯರು ಮತ್ತು ಪರೀಕ್ಷಾ ಕೇಂದ್ರದ ಸಿಬ್ಬಂದಿ ನಡುವೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯುವುದರ ಕುರಿತು ಕಾಲೇಜಿನ ಒಳಗೆ ಚರ್ಚೆ ನಡೆದಿದೆ. ವಿದ್ಯಾರ್ಥಿನಿಯರಾದ ಆಲಿಯಾ ಹಾಗೂ ರೇಶಂ ತಾವು ಹಿಜಾಬ್ ಧರಿಸಿಯೇ ಪರೀಕ್ಷೆ ಬರೆಯುವುದಾಗಿ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾರೆ. ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ವಿದ್ಯಾರ್ಥಿನಿಯರ ಜೊತೆ ಮಾತನಾಡಿ ಮನವೊಲಿಸಲು ಪ್ರಯತ್ನಿಸಿದ್ದಾರೆ.
ಬುರ್ಖಾ ತೊಟ್ಟು ಪರೀಕ್ಷಾ ಕೇಂದ್ರಕ್ಕೆ ಬಂದಿರುವ ಇಬ್ಬರು ವಿದ್ಯಾರ್ಥಿಗಳು ಹಿಜಾಬ್ ತೆಗೆದು ಪರೀಕ್ಷೆ ಬರೆಯಯಲು ಒಪ್ಪದೇ ಇದ್ದ ಕಾರಣ ಅವರನ್ನು ಪರೀಕ್ಷಾ ಕೇಂದ್ರದಿಂದ 10.45ಕ್ಕೆ ಹೊರಗೆ ಕಳುಹಿಸಲಾಗಿದೆ. ಹಿಜಾಬ್ಗೆ ಅವಕಾಶ ನಿರಾಕರಣೆ ಹಿನ್ನೆಲೆ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೇ ಹೊರಗೆ ನಡೆದಿದ್ದಾರೆ.
ಇದನ್ನೂ ಓದಿ: ಹಿಜಾಬ್, ಬುರ್ಕಾ ತೆಗೆದಿರಿಸಿ ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು