ಕಾರವಾರ(ಉತ್ತರ ಕನ್ನಡ): ಭಾರತೀಯ ನೌಕಾ ದಿನಾಚರಣೆ ಅಂಗವಾಗಿ ಕಾರವಾರದ ಅರಗಾ ಐಎನ್ಎಸ್ ಕದಂಬ ನೌಕಾನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗವಹಿಸಿದ್ದರು. ಈ ವೇಳೆ ನೇವಿ ಬ್ಯಾಂಡ್ ಪ್ರದರ್ಶನ ಹಾಗೂ ನೌಕಾನೆಲೆಯ ನೌಕೆಗಳ ವಿದ್ಯುತ್ ಅಲಂಕಾರ ಗಮನ ಸೆಳೆಯಿತು.
ಸೂರ್ಯಾಸ್ತಕ್ಕೂ ಮೊದಲು ನೌಕಾಪಡೆಯ ಬ್ಯಾಂಡ್ ಸಿಬ್ಬಂದಿ ವಾದ್ಯ ಪರಿಕರಗಳಲ್ಲಿ ವಿವಿಧ ದೇಶಭಕ್ತಿ ಗೀತೆಗಳನ್ನು ನುಡಿಸಿದರು. ಬ್ಯಾಂಡ್ ಸಿಬ್ಬಂದಿ ಬೀಟಿಂಗ್ ರಿಟ್ರೀಟ್ ಮೂಲಕ ದೇಶದ ನೌಕಾಪಡೆ ಸಿಬ್ಬಂದಿಯ ತ್ಯಾಗ, ಬಲಿದಾನ ಮತ್ತು ಸಾಮರ್ಥ್ಯವನ್ನು ಸ್ಮರಿಸಿದರು. ನಂತರ ನೌಕಾಪಡೆಯ ಧ್ವಜದ ಅವರೋಹಣ ಮಾಡಲಾಯಿತು.
![Governor participated in the Navy Day programme](https://etvbharatimages.akamaized.net/etvbharat/prod-images/17114256_tmeg.jpg)
ಸಂಭ್ರಮಾಚರಣೆಯ ಭಾಗವಾಗಿ ನೌಕಾಪಡೆಯ ನೌಕೆಗಳಾದ ಐ.ಎನ್.ಎಸ್ ಸುವರ್ಣಾ, ಐ.ಎನ್.ಎಸ್ ತಿಲ್ಲಾಂ ಚಾಂಗ್ ಮತ್ತು ಐ.ಎನ್.ಎಸ್ ಕೋಸ್ವಾರಿಗಳಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸುಡುಮದ್ದುಗಳ ಚಿತ್ತಾರ ಆಗಸವನ್ನು ವರ್ಣಮಯಗೊಳಿಸಿತ್ತು.
![Electrical decoration for vessels](https://etvbharatimages.akamaized.net/etvbharat/prod-images/17114256_meg.jpg)
1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಭಾರತದ ಜಯಭೇರಿಯಲ್ಲಿ ನೌಕಾಪಡೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಡಿ.4ರಂದು ಕರಾಚಿಯ ಬಂದರಿನ ಮೇಲೆ ದಾಳಿ ನಡೆಸಿ ಪಾಕಿಸ್ತಾನದ ಜಂಘಾಬಲವನ್ನೇ ಉಡುಗಿಸಿತ್ತು. ಬಳಿಕ ಭಾರತ ವಿಜಯ ಸಾಧಿಸಿತ್ತು. ಈ ಹಿನ್ನೆಲೆ ಭಾರತದಲ್ಲಿ ನೌಕಾ ದಿನವಾಗಿ ಆಚರಿಸಲಾಗುತ್ತಿದೆ.
ಕರ್ನಾಟಕ ನೌಕಾವಲಯದ ನೇವಿ ವೈವ್ಸ್ ಸಂಘದ ಅಧ್ಯಕ್ಷೆ ಗುಲ್‌ರುಖ್ ಆನಂದ್, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ರಿಯರ್ ಅಡ್ಮಿರಲ್ ಡಿ.ಕೆ.ಗೋಸ್ವಾಮಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ: ಇಂಡೋ ಪಾಕ್ ಯುದ್ಧದಲ್ಲಿ ಮುಂಚೂಣಿಯಲ್ಲಿದ್ದ ನೌಕೆ ನಿರ್ಲಕ್ಷ್ಯ: ಉಸಿರುಗಟ್ಟುವಂತಿದೆ ಚಾಪೆಲ್ ನೌಕೆ ಮ್ಯೂಸಿಯಂ