ಉಡುಪಿ : ಯೂತ್ ಕಾಂಗ್ರೆಸ್‌ನ ಮುಂದಿನ ಪಟ್ಟ ಖಾತ್ರಿ ಆಗುತ್ತಿದಂತೆ ನಲಪಾಡ್ ಅವರು ತಮ್ಮ ಕರಾವಳಿ ಭೇಟಿಯಲ್ಲಿ ಭರ್ಜರಿ ಹವಾ ಮೆರೆದಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜೊತೆಗೆ ಉಡುಪಿಯ ಮಲ್ಪೆ ಬಂದರಿಗೆ ಭೇಟಿ ನೀಡಿದ ವೇಳೆ ಪಕ್ಕದಲ್ಲಿದ್ದ ಮೀನು ಮಾರುಕಟ್ಟೆಗೂ ಭೇಟಿ ನೀಡಿದ್ದರು. ಈ ವೇಳೆ ಮೀನು ಮಾರಾಟ ಮಾಡುತ್ತಿದ್ದ ಮಹಿಳೆಯರ ಜೊತೆಗೆ ಮಾತನಾಡಿದರು. ಈ ವೇಳೆ ವ್ಯಾಪಾರಸ್ಥ ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿ ಅಳಲು ತೋಡಿಕೊಂಡರು. ಅದಕ್ಕೆ ಸ್ಪಂದಿಸಿದ ನಲಪಾಡ್, ತಲಾ ಎರಡು ಸಾವಿರ ರೂ. ನೀಡಿ ಸುಮಾರು 100 ಕೆಜಿ ಮೀನುಗಳನ್ನು ಖರೀದಿ ಮಾಡಿದರು.
ಇನ್ನೂ ಮೀನುಗಾರ ಮಹಿಳೆಯರ ಜೊತೆ ರಾಜಕೀಯ ವಿಚಾರ ಮಾತಾಡಿದಾಗ ಎಲ್ಲಾ ಪಕ್ಷದವರು ಒಂದೇ, ಮೀನುಗಾರರಿಗೆ ಯಾವ ಪಕ್ಷದಿಂದಲೂ ಪ್ರಯೋಜನ ಆಗಿಲ್ಲ ಎಂದೇಳುವ ಮೂಲಕ ನಲಪಾಡ್‌ಗೆ ಮುಜುಗರ ಉಂಟಾಗುವಂತೆ ಮಾಡಿದ ಪ್ರಸಂಗವೂ ನಡೆಯಿತು.
ಸಿಎಂ ವಿಚಾರ ಮಾತಾಡಿ ನಲಪಾಡ್ ಎಡವಟ್ಟು : ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗ್ತಾರೆ ಎಂದೇಳುವ ಮೂಲಕ ನಲಪಾಡ್ ಎಡವಟ್ಟು ಮಾಡಿಕೊಂಡಿದ್ದಾರೆ. ಮೀನುಗಾರರ ಮಹಿಳೆಯರ ಜೊತೆಗೆ ಮಾತನಾಡುತ್ತಾ ಸಿಎಂ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಮುಂದಿನ ಎರಡು ವರ್ಷಗಳಲ್ಲಿ ಚುನಾವಣೆ ಬರುತ್ತೆ, ಎಲ್ಲರೂ ಮತ ಹಾಕಿದ್ರೆ ಡಿ ಕೆ ಶಿವಕುಮಾರ್ ಸಿಎಂ ಆಗ್ತಾರೆ. ಡಿ ಕೆ ಶಿವಕುಮಾರ್ ಅವರು ಕಾಂಗ್ರೆಸ್ ಮುಖ್ಯಮಂತ್ರಿ ಆಗ್ತಾರೆ ಎಂದು ನಲಪಾಡ್ ಹೇಳಿದ್ದಾರೆ.