ಉಡುಪಿ : ಮಾಧ್ವ ಮತದ ಮೂಲಕೇಂದ್ರವಾಗಿರುವ ಉಡುಪಿಯ ಶ್ರೀಕೃಷ್ಣಮಠದಲ್ಲಿ ಇಂದು ಸಾವಿರಾರು ಭಕ್ತರು ತಪ್ತ ಮುದ್ರಾಧಾರಣೆ ಮಾಡಿಸಿಕೊಂಡರು. ಭಕ್ತಾದಿಗಳಿಗೆ ಪರ್ಯಾಯ ಮಠಾಧೀಶರಾದ ಪಲಿಮಾರು ಸ್ವಾಮೀಜಿಯವರು ಮುದ್ರಾಧಾರಣೆ ಮಾಡಿದರು.
ಏನಿದು ತಪ್ತ ಮುದ್ರಾಧಾರಣೆ?
ತಪ್ತ ಮುದ್ರಾಧಾರಣೆ ವೈಷ್ಣವ ಸಂಪ್ರದಾಯದ ಒಂದು ವಿಶಿಷ್ಟ ಆಚರಣೆ. ಪ್ರಥಮ ಏಕಾದಶಿಯ ದಿನ ವಾರ್ಷಿಕ ಸಂಸ್ಕಾರವಾಗಿ ದೇಹದ ಮೇಲೆ ಮುದ್ರೆ ಹಾಕಿಸಿಕೊಳ್ಳಲಾಗುತ್ತೆ. ಆಚಾರ್ಯ ಮಧ್ವರ ಕಾಲದಿಂದ ಅಂದರೆ ಎಂಟ್ನೂರು ವರ್ಷಗಳಿಂದ ಈ ಆಚರಣೆ ಚಾಲ್ತಿಯಲ್ಲಿದೆ. ಉಡುಪಿ ಶ್ರೀಕೃಷ್ಣಮಠದಲ್ಲಿ ಇಂದು ಸಾವಿರಾರು ಮಂದಿ ಪರ್ಯಾಯ ಮಠಾಧೀಶರಾದ ಪಲಿಮಾರು ಸ್ವಾಮೀಜಿಯಿಂದ ಮುದ್ರಾಧಾರಣೆ ಮಾಡಿಸಿಕೊಂಡರು. ಕೇವಲ ಯತಿಗಳಿಗೆ ಮಾತ್ರ ಮುದ್ರಾಧಾರಣೆ ಮಾಡುವ ಅಧಿಕಾರವಿದೆ. ಮಾಧ್ವ ಸಂಪ್ರದಾಯದ ಇತರ ಮಠಾಧೀಶರು ದೇಶದ ನಾನಾ ಭಾಗಗಳಲ್ಲಿ ಮುದ್ರಾಧಾರಣೆ ಮಾಡಿದರು. ನಾವು ದೇವರ ಪಕ್ಷದವರು ಎಂಬುದರ ಸಂಕೇತವಾಗಿ ವೈಷ್ಣವ ಚಿಹ್ನೆಗಳನ್ನು ಮೈಮೇಲೆ ಧರಿಸುವುದು ಈ ಆಚರಣೆಯ ವಿಶೇಷ.
ಭಗವಂತನ ಕುರಿತಾದ ಶ್ರದ್ಧೆಯನ್ನು ಪ್ರಕಟಿಸುವುದು ಮುದ್ರಾಧಾರಣೆಯ ಮೂಲ ಉದ್ದೇಶ. ಸುದರ್ಶನ ಹೋಮವನ್ನು ನಡೆಸಿ, ಶಂಖ ಮತ್ತು ಚಕ್ರದ ಮುದ್ರೆಯನ್ನು ಅದರ ಶಾಖದಲ್ಲಿರಿಸಲಾಗುತ್ತೆ. ಬಳಿಕ ಆ ಚಿಹ್ನೆಗಳನ್ನು ಮಠಾಧೀಶರ ಮೂಲಕ ಮೈಮೇಲೆ ಹಾಕಿಸಿಕೊಳ್ಳಲಾಗುತ್ತೆ.
ದೇವತೆಗಳು ಕೂಡಾ ಇಂದು ಮುದ್ರಾಧಾರಣೆ ಮಾಡಿಕೊಳ್ಳುತ್ತಾರೆ. ಶ್ರೀ ಮಧ್ವಾಚಾರ್ಯರು ಸ್ವರ್ಗದಲ್ಲಿ ಅವರಿಗೆ ಮುದ್ರಾಧಾರಣೆ ಮಾಡಿಸುತ್ತಾರೆ ಎಂಬ ನಂಬಿಕೆಯಿದೆ. ಮುದ್ರಾಧಾರಣೆಯಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅನ್ನೋದು ಜನರ ವಿಶ್ವಾಸ. ಮಳೆಗಾಲದಲ್ಲಿ ಬಾಧಿಸುವ ಎಲ್ಲಾ ಬಗೆಯ ಚರ್ಮ ವ್ಯಾದಿಗಳಿಗೆ ಈ ಲೋಹಮುದ್ರೆಯಿಂದ ಪರಿಹಾರ ಕಾಣಬಹುದು ಅನ್ನೋದು ಭಕ್ತರ ಅಭಿಮತ.