ಉಡುಪಿ: ನಿನ್ನೆ ಗಂಗೆಯ ತಂಗಿ ಭಾಗೀರಥಿಯ ಜನ್ಮ ದಿನವಾಗಿತ್ತು. ಭಗೀರಥ ಮುನಿಯ ಮಹಾತಪಸ್ಸಿಗೆ ಒಲಿದು ಭೂಮಿಗೆ ಇಳಿದವಳು ಭಾಗೀರಥಿ. ಉಡುಪಿಯ ಕೃಷ್ಣಮಠದಲ್ಲೂ ಭಾಗೀರಥಿ ದೇವಿಯ ಸನ್ನಿಧಾನವಿದೆ. ಇಲ್ಲಿ ಒಂದು ಪವಾಡ ನಡೆದಿದೆ ಎಂಬ ಮಾತುಗಳು ಜಿಲ್ಲೆಯಾದ್ಯಂತ ಕೇಳಿಬರುತ್ತಿವೆ.
ಹೌದು, ಪರ್ಯಾಯ ಪಲಿಮಾರು ಸ್ವಾಮೀಜಿಗಳು ಭಾಗೀರಥಿಗೆ ಗಂಗಾರತಿ ಎತ್ತುತ್ತಿದ್ದಂತೆ ಉಡುಪಿಯಲ್ಲಿ ಧಾರಾಕಾರ ಮಳೆ ಆರಂಭವಾಗಿದೆ. ಇದು ಕಾಕತಾಳಿಯವೋ- ಪ್ರಕೃತಿ ಸಹಜವೋ ಗೊತ್ತಿಲ್ಲ.
ಭಾರತೀಯ ಪರಂಪರೆಯ ಹಿಂದೂ ನೆಲೆಗಟ್ಟಿನಲ್ಲಿ ನದಿಗಳಿಗೆ ದೇವಾನುದೇವತೆಗಳ ಸ್ಥಾನಮಾನ ನೀಡಿ ಪೂಜಿಸುವುದು ಅನಾದಿಕಾಲದಿಂದಲೂ ನಡೆದು ಬಂದ ಪದ್ಧತಿ. ನಿನ್ನೆ ದೇಶದೆಲ್ಲೆಡೆ ಭಾಗೀರಥಿಯನ್ನು ವಿಶೇಷವಾಗಿ ಪೂಜಿಸಲಾಯಿತು. ಉತ್ತಮ ಮಳೆಯಾಗಲಿ, ಮಳೆ-ಬೆಳೆ ಬರಲಿ ಎಂದು ಪ್ರಾರ್ಥನೆ ಸಲ್ಲಿಸುವುದು ಸಂಪ್ರದಾಯ. ಇಳೆಗೆ ಜಲವಿತ್ತ ಗಂಗೆಯ ತಂಗಿ ಭಾಗೀರಥಿ ದೇವಿ ಎಂಬುದು ಹಿಂದೂ ಧಾರ್ಮಿಕ ನಂಬಿಕೆ. ಭಗೀರಥ ಮುನಿಯು ತನ್ನ ಪೂರ್ವಜರ ಪಾಪ ದೋಷ ಕಳೆಯುವುದಕ್ಕಾಗಿಯೇ ಭಾಗೀರಥಿ ದೇವಿಯನ್ನು ತಪಸ್ಸಿನಿಂದ ಒಲಿಸಿಕೊಂಡಿದ್ದ. ಆಕೆ ಧರೆಗಿಳಿದು ಬರುವಂತೆ ಮಾಡಿದ ಅನ್ನೋದು ಪುರಾಣ. ಅಂತಹ ಭಾಗೀರಥಿ ಜಯಂತಿಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ.
ಪರಂಪರೆಯಂತೆ ಉಡುಪಿ ಕೃಷ್ಣ ಮಠಕ್ಕೂ ಭಾಗೀರಥಿ ದೇವಿಗೂ ನಂಟಿದೆ ಅನ್ನೋ ನಂಬಿಕೆಯಿದೆ. ಆಚಾರ್ಯ ಮಧ್ವರ ಭಕ್ತಿಗೆ ಒಲಿದ ಭಾಗೀರಥಿ ಉಡುಪಿ ಕೃಷ್ಣ ಮಠಕ್ಕೂ 12 ವರ್ಷಕ್ಕೊಮ್ಮೆ ಬರುತ್ತಾಳೆ ಅನ್ನೋದು ಪ್ರತೀತಿ. ಅದಮಾರು ಮಠ ಹಿರಿಯ ಶ್ರೀ ಪಾದರು ಭಾಗೀರಥಿ ದೇವಿಗಾಗಿಯೇ ಕೃಷ್ಣಮಠದ ಮಧ್ವ ಸರೋವರದದಲ್ಲಿ ಗುಡಿ ಕಟ್ಟಿ ಪೂಜೆ ಆರಂಭಿಸಿದ್ದರು. ಪ್ರತಿವರ್ಷ ಪರ್ಯಾಯ ಸ್ವಾಮಿಗಳು ಶ್ರೀ ಭಾಗೀರಥಿ ದೇವಿಗೆ ವಿಶೇಷವಾಗಿ ಪೂಜೆ ಸಲ್ಲಿಸುತ್ತಾರೆ. ಅದರಂತೆ ಮಧ್ವ ಸರೋವರದ ದೇವಿಯ ಗುಡಿಯಲ್ಲಿ ನಿನ್ನೆ ವಿಶೇಷ ಪೂಜೆ ನಡೆಸಲಾಯ್ತು.
ಭಾಗೀರಥಿ ಜನ್ಮದಿನದಂದು ಮಧ್ವ ಸರೋವರ ತುಂಬಿ ತುಳುಕೋದು ಸಾಮಾನ್ಯ. ಆದರೆ ಈ ಬಾರಿ ಉಡುಪಿಗೆ ಬರ ತಟ್ಟಿದೆ. ಹಾಗಾಗಿ ತೆಪ್ಪೋತ್ಸವಕ್ಕೆ ಅವಕಾಶ ಇಲ್ಲದಂತಾಗಿದೆ. ತೆಪ್ಪೋತ್ಸವ ನಡೆದಿಲ್ಲವಾದ್ರೂ, ಪಲಿಮಾರು ವಿದ್ಯಾಧೀಶ ಶ್ರೀಪಾದರು ವಿಶೇಷವಾಗಿ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ರು. ಕಾಕತಾಳಿಯ ಎಂಬಂತೆ ಅದೇ ಸಮಯದಲ್ಲಿ ಕೃಷ್ಣಮಠ ಸೇರಿದಂತೆ ಉಡುಪಿಯ ಆಸುಪಾಸು ಮಳೆ ಅಬ್ಬರಿಸಿದೆ.
ಕರಾವಳಿಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿ ಜನ ತತ್ತರಿಸಿದ್ರು. ಇನ್ನೊಂದು ಕಡೆಯಿಂದ ನೀರಿಗೆ ಬರ ಬಂದು ಜನ ಪರದಾಡುತ್ತಿದ್ರು, ರೈತರು ಕೂಡ ಕೃಷಿ ಕಾರ್ಯಕ್ಕಾಗಿ ವರುಣ ದೇವನ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಆದ್ರೆ ಭಾಗೀರಥಿ ದೇವಿಯ ಜಯಂತಿಯಂದು ಉಡುಪಿಯಲ್ಲಿ ಸಾಕಷ್ಟು ಮಳೆಯಾಗಿ ಧರೆ ತಂಪಾಗಿದೆ. ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಮತ್ತೊಂದೆಡೆ ಅರಬ್ಬೀ ಸಮುದ್ರ ಕೂಡ ಪ್ರಕ್ಷುಬ್ಧಗೊಂಡಿದೆ. ಸಮುದ್ರದ ಅಲೆಗಳ ಅಬ್ಬರ ಹೆಚ್ಚಾಗಿದ್ದು ಜಿಲ್ಲೆಯಲ್ಲಿ ಮಳೆ ಇನ್ನಷ್ಟು ಹೆಚ್ಚುವ ಸೂಚನೆಯನ್ನು ಸಿಕ್ಕಿದೆ. ಜನಸಾಮಾನ್ಯರ ನಿತ್ಯ ಭಕ್ತಿಗೋ, ಪಲಿಮಾರು ಶ್ರೀಗಳ ಪೂಜೆ, ಪ್ರಾರ್ಥನೆಗೋ ಗೊತ್ತಿಲ್ಲ. ಆದ್ರೆ ದೇವರ ಕೃಪೆಯಿಂದ ಒಲಿದು ಮಳೆ ಬಂದಿದೆ ಎನ್ನಲಾಗ್ತಿದೆ.
ಒಟ್ಟಿನಲ್ಲಿ ಭಾಗೀರಥಿ ಜನ್ಮದಿನ ಜನರಲ್ಲಿ ಸಾರ್ಥಕತೆಯ ಮನೋಭಾವ ಮೂಡಿಸಿದೆ. ಇನ್ನಾದ್ರೂ ಮಧ್ವ ಸರೋವರ ಸೇರಿದಂತೆ ನದಿ, ಕೆರೆಗಳು ತುಂಬಿ ಹರಿದು ಎಲ್ಲರಲ್ಲಿ ಸಂತೃಪ್ತ ಭಾವ ಮೂಡಲಿ ಅನ್ನೋದು ಎಲ್ಲರ ಹಾರೈಕೆ.