ಉಡುಪಿ: ಕೊರೊನಾ ಹಾಗೂ ಲಾಕ್ಡೌನ್ ಪರಿಣಾಮ ಯಕ್ಷರಂಗಕ್ಕೂ ತಟ್ಟಿದೆ. ಇದರಿಂದಾಗಿ ಯಕ್ಷಗಾನವನ್ನು ವೃತ್ತಿಯಾಗಿಸಿಕೊಂಡುವರು ಅಕ್ಷರಶಃ ಒಪ್ಪತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಮೇಳಗಳು ಕೊರೊನಾದಿಂದಾಗಿ ಸ್ಥಗಿತಗೊಂಡಿವೆ. ಆದರೆ ಯಕ್ಷಗಾನವನ್ನೇ ವೃತ್ತಿಯನ್ನಾಗಿಸಿಕೊಂಡಿದ್ದ ಕಲಾವಿದರೊಬ್ಬರು ತಮ್ಮ ಜೀವನ ನಿರ್ವಹಣೆ ಕಷ್ಟವಿದ್ದರೂ ಸಮಾಜ ಸೇವೆಗೆ ಮುಂದಾಗಿದ್ದಾರೆ.
ಶಂಕರ ದೇವಾಡಿಗ ಎಂಬ ಹಿರಿಯ ಯಕ್ಷಗಾನ ಕಲಾವಿದರು ಸುಮಾರು ಮೂವತ್ತು ವರ್ಷಗಳಿಂದ ಬಡಗು ತಿಟ್ಟಿನ ವಿವಿಧ ಮೇಳಗಳಲ್ಲಿ ಸ್ತ್ರೀ ವೇಷಧಾರಿಯಾಗಿ ರಂಗದಲ್ಲಿ ತನ್ನದೇ ಛಾಪು ಮೂಡಿಸಿದವರು. ಯಕ್ಷಗಾನವನ್ನೇ ವೃತ್ತಿ ಮಾಡಿಕೊಂಡ ಅಪ್ರತಿಮ ಕಲಾವಿದರಲ್ಲಿ ಒಬ್ಬರಾದ ಇವರು ಲಾಕ್ಡೌನ್ ವೇಳೆ ಮಾಸ್ಕ್ ತಯಾರಿಸುವ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ. ಪೆರ್ಡೂರು, ಸಾಲಿಗ್ರಾಮ ಹೀಗೆ ಪ್ರಸಿದ್ಧ ಡೇರೆಗಳಲ್ಲಿ ಹೆಸರುವಾಸಿಯಾಗಿದ್ದ ಇವರು ಲಾಕ್ಡೌನ್ನಿಂದಾಗಿ ತಾವು ಈ ಹಿಂದೆ ಕಲಿತಿದ್ದ ಟೈಲರಿಂಗ್ ಅನ್ನೇ ಮತ್ತೆ ಆಶ್ರಯಿಸಿದ್ದಾರೆ.
ಶಂಕರ ದೇವಾಡಿಗರು ಹಲವಾರು ವರ್ಷಗಳಿಂದ ಯಕ್ಷ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದು ಈ ಬಾರಿಯಷ್ಟು ಆರ್ಥಿಕ ಪರಿಸ್ಥಿತಿ ಹದಗೆಟ್ಟಿರಲಿಲ್ಲ. ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಯಕ್ಷ ಕಲಾವಿದರು ಕೂಡಾ ಆತಂಕದಲ್ಲಿದ್ದು ಸರ್ಕಾರ, ಸಂಘ-ಸಂಸ್ಥೆಗಳು ನೆರವಿಗೆ ಬರಬೇಕಿದೆ. ಜೊತೆಗೆ ಮನೆಯಲ್ಲಿಯೇ ಇರುವವರು ಉಪವೃತ್ತಿಯನ್ನು ಆಯ್ದುಕೊಂಡು ಕೆಲಸ ಮಾಡುವುದರ ಮೂಲಕ ಸಮಯ ಸದುಪಯೋಗಪಡಿಸಿಕೊಳ್ಳಬೇಕಿದೆ ಎಂಬುವುದಕ್ಕೆ ಶಂಕರ ದೇವಾಡಿಗರು ಮಾದರಿಯಾಗಿದ್ದಾರೆ.