ಮಣಿಪಾಲ: ರಾಜಧಾನಿ ದೆಹಲಿಯಲ್ಲಿ ಕೊರೊನಾ ಸಾಂಕ್ರಾಮಿಕವು ವ್ಯಾಪಕವಾಗಿ ಹರಡುತ್ತಿರುವುದರಿಂದ, ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸಹಾಯ ಮಾಡಲು ಮಣಿಪಾಲ ಸಂಸ್ಥೆಯ ಅಂಗ ಸಂಸ್ಥೆಯಾದ ಮಣಿಪಾಲ ಆಸ್ಪತ್ರೆಯಿಂದ 19 ಮಂದಿ ದಾದಿಯರ ತಂಡ ದೆಹಲಿಗೆ ಪ್ರಯಾಣ ಬೆಳೆಸಿದೆ.
ದೆಹಲಿಯ ದ್ವಾರಕಾ ಆಸ್ಪತ್ರೆಯ ಬೇಡಿಕೆಯ ಮೇರೆಗೆ ಕಸ್ತೂರಬಾ ಆಸ್ಪತ್ರೆ ಮಣಿಪಾಲದ 19 ದಾದಿಯರ ಮೊದಲ ತಂಡ ಇಂದು ದೆಹಲಿಗೆ ತೆರಳಿತು. ಮೇ ಮೂರರಂದು ನರ್ಸಿಂಗ್ ವೃತ್ತಿಪರರ ಹೆಚ್ಚಿನ ಅವಶ್ಯಕತೆಯ ಕೋರಿಕೆಯನ್ನು ಮಣಿಪಾಲಕ್ಕೆ ದ್ವಾರಕಾ ಆಸ್ಪತ್ರೆಯು ನೀಡಿತ್ತು.
"ಇದು ಇಡೀ ಮಣಿಪಾಲ ಸಮೂಹಕ್ಕೆ ಹೆಮ್ಮೆಯ ಕ್ಷಣವಾಗಿದೆ. ದಾದಿಯರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ತಮ್ಮ ನಿಸ್ವಾರ್ಥ ಸೇವೆಯನ್ನು ನೀಡುವುದಲ್ಲದೆ, ತಮ್ಮ ಆರೈಕೆ ಮತ್ತು ಜೀವ ಉಳಿಸುವ ವೃತ್ತಿಯ ಬಗ್ಗೆ ನಿಜವಾದ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ." ಎಂದು ಆಸ್ಪತ್ರೆಯ ಆಡಳಿತ ಮಂಡಳಿ ಪ್ರತಿಕ್ರಿಯೆ ನೀಡಿದೆ.