ಕುಂದಾಪುರ (ಉಡುಪಿ): ಕುಂದಾಪುರ ತಾಲೂಕಿನ ಆಜ್ರಿ ಮೂಲದ ಯುವಕ, ಜರ್ಮನಿಯ ಯುವತಿಯ ಜೊತೆಗೆ ಹಿಂದೂ ಸಂಪ್ರದಾಯದಂತೆ ವಿವಾಹ ಮಾಡಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಸಿದ್ದಾಪುರ ಸಮೀಪದ ಚಿತ್ತೇರಿ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಇವರು ಹಸೆಮಣೆ ಏರಿದ್ದು, ಎರಡೂ ಕುಟುಂಬಗಳ ಹಿರಿಯರು ಮದುವೆಗೆ ಸಾಕ್ಷಿಯಾದರು. ಕುಂದಾಪುರ ತಾಲೂಕಿನ ಗ್ರಾಮೀಣ ಭಾಗವಾದ ಆಜ್ರಿಯ ಕರಿಮನೆ ಸುವರ್ಣ ಮತ್ತು ಪಂಜು ಪೂಜಾರಿ ದಂಪತಿಯ ಪುತ್ರ ಚಂದನ್ ಹಾಗೂ ಜರ್ಮನಿಯ ಪೆಟ್ರ ಶ್ರೂಆರ್ ಮತ್ತು ಪೀಟರ್ ಶ್ರೂಆರ್ ಮುನಿಸ್ತರ್ ಯುನಿಕಬ್ ದಂಪತಿಯ ಪುತ್ರಿ ಕಾರಿನ್ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನವ ಜೋಡಿ.
![Kundapur young man married with German girl in udupi](https://etvbharatimages.akamaized.net/etvbharat/prod-images/03-01-2024/img-20240103-wa0020_0301newsroom_1704294449_237.jpg)
ಚಂದನ್ ಅವರು ಜರ್ಮನಿಯಲ್ಲಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು, ಶಿಕ್ಷಕಿಯಾಗಿರುವ ಕಾರಿನ್ ಅವರನ್ನು ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೇಮದ ಬಗ್ಗೆ ತಮ್ಮ ಕುಟುಂಬಿಕರೊಂದಿಗೆ ಮಾತುಕತೆ ನಡೆಸಿದ್ದರು. ಉಭಯ ಕುಟುಂಬದವರು ಪರಸ್ಪರ ಚರ್ಚಿಸಿ ಈ ಜೋಡಿಯ ಮದುವೆಗೆ ಸಮ್ಮತಿಸಿದ್ದರು. ಅದರಂತೆ ಇವರ ವಿವಾಹ ನೆರವೇರಿದ್ದು, ಎರಡು ಕಡೆಯ ಬಂಧು-ಮಿತ್ರರು, ಹಿತೈಷಿಗಳು ಪಾಲ್ಗೊಂಡು ನವಜೋಡಿಗಳಿಗೆ ಶುಭ ಹಾರೈಸಿದರು.
ಇದನ್ನೂ ಓದಿ: ಜನರ ಅಹವಾಲುಗಳ ತ್ವರಿತ ವಿಲೇವಾರಿಗೆ ನೋಡಲ್ ಅಧಿಕಾರಿಗಳ ನಿಯೋಜನೆ: ಡಿಸಿಎಂ ಡಿ.ಕೆ ಶಿವಕುಮಾರ್