ಉಡುಪಿ: ಸದ್ಯ ರಾಜ್ಯ ರಾಜಕಾರಣದ ಗೊಂದಲಗಳಿಂದ ದೂರ ಉಳಿದಿರುವ ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ಹಾಗು ಪತ್ನಿ ಚೆನ್ನಮ್ಮ ಶ್ರೀಕೃಷ್ಣನ ದರ್ಶನ ಮಾಡಿ, ಪೇಜಾವರ ಸ್ವಾಮೀಜಿಯವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ಚುನಾವಣೆಯ ಅಬ್ಬರದ ಪ್ರಚಾರದಿಂದ ದಣಿದಿರುವ ದೊಡ್ಡಗೌಡರು ವಿಶ್ರಾಂತಿ ಪಡೆಯುತ್ತಿದ್ದು,ಕಾಪುವಿನ ಸಮುದ್ರ ತಟದಲ್ಲಿ ಗಾಳಿ ಸೇವನೆ ಮಾಡುತ್ತಾ ಪತ್ನಿ ಚೆನ್ನಮ್ಮ ಜೊತೆಗೆ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಬಿಡುವು ಮಾಡಿಕೊಂಡು ದೇವರ ದರ್ಶನ ಮಾಡುತ್ತಿರುವ ಅವರು, ಇವತ್ತು ಪೇಜಾವರ ಸ್ವಾಮಿಗಳ ಹುಟ್ಟು ಹಬ್ಬದ ಶುಭಾಶಯ ಕೋರಲು ಕೃಷ್ಣ ಮಠಕ್ಕೆ ವಿಶೇಷ ಭೇಟಿ ನೀಡಿ ಆಶೀರ್ವಾದ ಪಡೆದರು.
ಮಾಜಿ ಪ್ರಧಾನಿಗಳ ಅನಿರೀಕ್ಷಿತ ಭೇಟಿಯಿಂದ ಸಂತಸಗೊಂಡ ಪೇಜಾವರ ಸ್ವಾಮೀಜಿ, ಪಟ್ಟದ ದೇವರ ಸನ್ನಿಧಾನಕ್ಕೆ ದಂಪತಿಯನ್ನು ಕರೆದೊಯ್ದು ಇಬ್ಬರಿಗೂ ಆಶೀರ್ವಾದ ನೀಡಿದ್ರು. ಈ ವೇಳೆ ಇಬ್ಬರೂ ಕೆಲಕಾಲ ರಾಜಕೀಯ ವಿದ್ಯಮಾನಗಳ ಬಗ್ಗೆ ಸಮಾಲೋಚನೆಯನ್ನ ನಡೆಸಿದ್ದಾರೆ. ಒಂದು ವೇಳೆ ಮೋದಿ ಪ್ರಧಾನಿಯಾಗದಿದ್ರೆ, ತನಗೆ ಮತ್ತೆ ಪ್ರಧಾನಿಯಾಗುವ ಅವಕಾಶ ಇದೆ ಅನ್ನೋ ಇಂಗಿತವನ್ನು ದೇವೇಗೌಡರು ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದ್ರೆ, ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆ ನಡೆದಿರೋದನ್ನು ಸ್ವಾಮೀಜಿ ತಳ್ಳಿ ಹಾಕಿದ್ದಾರೆ. ದೇವೇಗೌಡರ ಗುಣಗಾನ ಮಾಡಿದ ಪೇಜಾವರ ಶ್ರೀಗಳು, ದೇವೇಗೌಡರು ಪ್ರಧಾನಿಯಾಗಿದ್ರೆ, ಕಾಶ್ಮೀರದ ಸಮಸ್ಯೆ ಬಗೆಹರಿಯುತ್ತಿತ್ತು ಎಂದು ಅಭಿಪ್ರಾಯ ಪಟ್ಟರು. ತುರ್ತುಪರಿಸ್ಥಿತಿ ಕಾಲದಲ್ಲಿ ದೇವೇಗೌಡರೊಂದಿಗಿನ ಒಡನಾಟವನ್ನು ಇದೇ ವೇಳೆ ಸ್ವಾಮೀಜಿ ಸ್ಮರಿಸಿದರು. ಆಡಂಬರವಿಲ್ಲದ ಚೆನ್ನಮ್ಮರ ಮುಗ್ಧ ಭಕ್ತಿಗೆ ಶ್ರೀಗಳು ಶಹಬ್ಬಾಸ್ ಎಂದಿದ್ದಾರೆ.
ಈಗಾಗಲೇ ಕೋಟ ಅಮೃತೇಶ್ವರಿ ದೇವಸ್ಥಾನ, ಜಲಂಚಾರು ಮಹಾಲಿಂಗೇಶ್ವರ ದೇವಸ್ಥಾನ, ಕಾಪು ಮಾರಿಗುಡಿ ಹಾಗೂ ಅಂಬಲಪಾಡಿ ಮಹಾಕಾಳಿ ದೇವಸ್ಥಾನಕ್ಕೆ ಎಚ್‌ಡಿಡಿ ಭೇಟಿ ನೀಡಿದ್ದು, ಇನ್ನೆರಡು ದಿನಗಳಲ್ಲಿ ಮತ್ತಷ್ಟು ದೇವಾಲಯಕ್ಕೆ ಹೋಗುವ ಕಾರ್ಯಕ್ರಮ ಹಾಕಿಕೊಂಡಿದ್ದಾರೆ.