ಉಡುಪಿ: ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ಕಟ್ಟೆ ಭೋಜಣ್ಣ ಸೂಸೈಡ್ ಪ್ರಕರಣದ ಹಿಂದೆ 9 ಕೋಟಿ ರೂಪಾಯಿ ಸಾಲದ ಕಥೆ ಇರುವ ಕುರಿತು ಭೋಜಣ್ಣ ಅವರು ಬರೆದಿಟ್ಟ ಡೆತ್ನೋಟ್ನಿಂದ ಬಹಿರಂಗವಾಗಿದೆ. ಕೋಟ್ಯಂತರ ರೂಪಾಯಿ ಸಾಲವೇ ಬೋಜಣ್ಣ ಅವರ ಆತ್ಮಹತ್ಯೆಗೆ ಕಾರಣವೇ ಎಂಬ ಆಯಾಮದಲ್ಲಿ ತನಿಖೆ ನಡೆಯುತ್ತಿದೆ.
ಡೆತ್ನೋಟ್ನಲ್ಲಿ ಮೊಳಹಳ್ಳಿ ಗಣೇಶ್ ಶೆಟ್ಟಿ ಮತ್ತು ಮಂಗಳೂರು ಇಸ್ಮಾಯಿಲ್ ಅವರ ಹೆಸರುಗಳು ಪ್ರಸ್ತಾಪ ಮಾಡಲಾಗಿದೆ. ಇಬ್ಬರೂ ಸೇರಿ 3 ಕೋಟಿ 34 ಲಕ್ಷ ನಗದು, 5 ಕೆಜಿ ಬಂಗಾರ ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಬಡ್ಡಿ ಆಸೆ ತೋರಿಸಿ ಭೋಜಣ್ಣ ಅವರಿಂದ ಇಷ್ಟೊಂದು ಹಣ ಪಡೆದು ಬಡ್ಡಿಯೂ ನೀಡದೇ, ಅಸಲೂ ಕೊಡದೇ ಮೊಳಹಳ್ಳಿ ಗಣೇಶ್ ಶೆಟ್ಟಿ ಸತಾಯಿಸುತ್ತಿದ್ದ ಎಂದು ಡೆತ್ನೋಟ್ನಲ್ಲಿ ಬರೆಯಲಾಗಿದೆ.
ಸಾಲದ ಹಣ ಮರಳಿಸಲು ಬೋಜಣ್ಣ ಅವರು ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಂದ ಐದಾರು ಬಾರಿ ಕಾಂಪ್ರಮೈಸ್ ಮಾಡಲು ಪ್ರಯತ್ನ ಕೂಡಾ ಮಾಡಲಾಗಿತ್ತು. ಇದಕ್ಕೂ ಜಗ್ಗದೇ ದುಡ್ಡು ಕೊಡದೇ ಮೊಳಹಳ್ಳಿ ಗಣೇಶ್ ಶೆಟ್ಟಿ ಸತಾಯಿಸುತ್ತಿದ್ದನಂತೆ. ಇದರಿಂದ ಬೇಸತ್ತು ಗಣೇಶ್ ಶೆಟ್ಟಿ ಮನೆ ಮುಂಭಾಗದಲ್ಲಿ ಭೋಜಣ್ಣ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳೂರು ಇಸ್ಮಾಯಿಲ್ ಮತ್ತು ಗಣೇಶ್ ಶೆಟ್ಟಿಯಿಂದ ಮನೆಯವರಿಗೆ ದುಡ್ಡು ತೆಗೆಸಿ ಕೊಡುವಂತೆ ಭೋಜಣ್ಣ ಅವರ ಕೊನೆಯ ಮನವಿ ಡೆತ್ನೋಟ್ನಲ್ಲಿದೆ. ಸದ್ಯ ಡೆತ್ನೋಟ್ ಆಧಾರದಲ್ಲಿ ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಓದಿ: ಜೆಡಿಎಸ್ ಜೊತೆ ಚುನಾವಣೆ ಮಾತ್ರವಲ್ಲ ಬೇರೆ ಯಾವ ಸಂಬಂಧವೂ ಇಲ್ಲ: ಸಿದ್ದರಾಮಯ್ಯ