ಉಡುಪಿ: ಕಟಪಾಡಿ ಪೇಟೆಯ ಹೃದಯ ಭಾಗದಲ್ಲಿರುವ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಿ ಬೀಳುವ ಪರಿಸ್ಥಿತಿಯಲ್ಲಿದೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಟಪಾಡಿಯ ಜನತೆ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ.
ಹೌದು, ಅತ್ಯಂತ ಹಳೆಯ ಟ್ಯಾಂಕ್ ಇದಾಗಿದ್ದು, ಕೆಳ ಭಾಗದಲ್ಲಿ ನೂರಾರು ರಿಕ್ಷಾಗಳು ನಿಲುಗಡೆ ಆಗುತ್ತದೆ. ಸುತ್ತಲೂ ಅಂಗಡಿಗಳಿವೆ. ಜನನಿಬಿಡ ಪ್ರದೇಶದಲ್ಲಿರುವ ಈ ನೀರಿನ ಟ್ಯಾಂಕ್ ಪಿಲ್ಲರ್ (ಕಬ್ಬಿಣದ ಪಿಲ್ಲರ್)ಗಳು ತುಕ್ಕು ಹಿಡಿದಿದ್ದು, ಅಪಾಯ ತಂದೊಡ್ಡುವ ಸಾಧ್ಯತೆಗಳಿವೆ.
ಸ್ಥಳೀಯ ಜನಪ್ರತಿನಿಧಿಗಳು ಈ ಟ್ಯಾಂಕ್ಗೆ ತೇಪೆ ಹಾಕಿ ಅನುದಾನ ಪಡೆಯುವುದರಲ್ಲಿ ನಿರತರಾಗಿದ್ದಾರೆಯೇ ಹೊರತು, ಜನರ ಜೀವದ ಕಾಳಜಿ ಇವರಿಗಿಲ್ಲ. ಈ ಹಿಂದೆ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ತೇಪೆ ಹಾಕುವ ಕೆಲಸ ಕಾರ್ಯ ನಡೆದಿದ್ದವು. ಆದ್ರೆ ಟ್ಯಾಂಕಿಗೆ ನೀರು ತುಂಬಿಸುವ ಕೆಲಸ ಕಾರ್ಯ ನಡೆದಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಕಟಪಾಡಿ ನಾಗರಿಕ ಸಮಿತಿ ಅಧ್ಯಕ್ಷರಾದ ರವೀಂದ್ರನಾಥ ಶೆಟ್ಟಿ ಮಾತನಾಡಿ, ಸದ್ಯ ಟ್ಯಾಂಕ್ ಉಪಯೋಗ ಇಲ್ಲದೇ ಶಿಥಿಲಾವಸ್ಥೆಯಲ್ಲಿದೆ. ಟ್ಯಾಂಕ್ನ ಕೆಳಭಾಗದಲ್ಲಿ ಹೊಟ್ಟೆ ಪಾಡಿಗಾಗಿ ದುಡಿಯುವ ರಿಕ್ಷಾ ಚಾಲಕರು ಇದ್ದು, ಮತ್ತೊಂದು ಭಾಗದಲ್ಲಿ ಅಂಗಡಿ ಮಾಲೀಕರು ತಮ್ಮ ಜೀವದ ಹಂಗು ತೊರೆದು ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ. ಈ ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಸಮಸ್ಯೆ ಪರಿಹರಿಸಬೇಕಾಗಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.