ಉಡುಪಿ: ಕುಂದಾಪುರ ತಾಲೂಕು ಕೋಟೇಶ್ವರದಲ್ಲಿ ಅಕ್ರಮ ದಾಸ್ತಾನು ಮಾಡಲಾಗಿದ್ದ ಅಕ್ಕಿ, ಗೋಧಿ ಧಾನ್ಯವನ್ನು ಉಡುಪಿಯ ಡಿಸಿಐಬಿ ಪೊಲೀಸರು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದು, ಐವರನ್ನು ಬಂಧಿಸಿದ್ದಾರೆ.
ಇಸ್ಮಾಯಿಲ್ ಬ್ಯಾರಿ, ಮುಸ್ತಫಾ ತೌಫಿಕ್, ಉಬೇದುಲ್ಲಾ, ಮಹಮ್ಮದ್ ಮೇಚ್ರಾ, ನಿಯಾಸ್ ಬಂಧಿತರು. ಡಿಸಿಐಬಿ ಪೊಲೀಸ್ ಇನ್ಸ್ಪೆಕ್ಟರ್ ಮಂಜಪ್ಪ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ, ಗೋದಾಮಿನಲ್ಲಿದ್ದ 55 ಟನ್ ಅಕ್ಕಿ, 2.75 ಲಕ್ಷ ನಗದು ಮತ್ತು ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರದ ಫ್ರೀ ರೇಷನ್ ಅಕ್ರಮವಾಗಿ ಸಂಗ್ರಹಿಸಿ ಬಳಿಕ ಅದನ್ನು ಕೇರಳಕ್ಕೆ ಸಾಗಾಟ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲದೆ ಈ ದಂಧೆಯಲ್ಲಿ ಸಾಧಾರಣ ಅಕ್ಕಿಗೆ ಪಾಲೀಶ್ ಮಾಡಿ ಅದನ್ನು ಸೋನಾ ಮಸೂರಿ ಅಕ್ಕಿ ಎಂದು ಮಾರಾಟ ಮಾಡುತ್ತಿದ್ದರಂತೆ. ಸದ್ಯ ಖದೀಮರ ತಂಡ ಪೊಲೀಸ್ ಬಲೆಗೆ ಬಿದ್ದಿದ್ದು, ಇವರೆಲ್ಲಾ ಕುಂದಾಪುರದ ಮೂಡು ಗೋಪಾಡಿ ಮತ್ತು ಕೇರಳ ಮೂಲದವರು ಎಂದು ತಿಳಿದು ಬಂದಿದೆ. ಇವರ ವಶದಲ್ಲಿದ್ದ ಲಾರಿ ಸೇರಿ ಸುಮಾರು ಒಂದು ಕೋಟಿ ರುಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.