ಉಡುಪಿ : ತಲೆಗೆ ಮುಟ್ಟಾಲೆ ಇಟ್ಟು, ಪಂಚೆ ಬಿಗಿದು ಮಗನ ಜೊತೆ ಕೃಷಿ ಕಾಯಕದಲ್ಲಿ ತೊಡಗಿರುವ ಇವರೇ ಶಿಕ್ಷಕ ಗೋವಿಂದ್ ರಾವ್. ಜಿಲ್ಲೆಯ ಗಿಳಿಯಾರು ನಿವಾಸಿಯಾಗಿರುವ ಗೋವಿಂದರಾವ್ ಅವರನ್ನ ನೋಡಿದ್ರೆ ಅಪ್ಪಟ ಕೃಷಿಕ ಅಂತಾ ನೀವು ಅಂದುಕೊಳ್ಳಬಹುದು. ಆದರೆ, ಇವರು ಮಾಬುಕಳ ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರು. ಇವರಿಗೆ ಬಿಡುವು ಸಿಕ್ಕಾಗಲೆಲ್ಲ ಹೊಲದಲ್ಲಿ ಕೆಲಸ ಮಾಡುತ್ತಾರೆ. ಸದ್ಯ ಇವರು ಭತ್ತ ಬೆಳೆದಿದ್ದು, ಇದಕ್ಕೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿತ್ತು.
ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ರಕ್ಷಿಸಲು ಇವರು ಹೊಸ ಉಪಾಯವೊಂದನ್ನ ಕಂಡುಕೊಂಡಿದ್ದಾರೆ. ತೆಂಗಿನ ಮರದ ನಡುವೆ ದಾರ ಕಟ್ಟಿ ಅದಕ್ಕೆ ಪ್ಲಾಸ್ಟಿಕ್ ಡಬ್ಬ ನೇತಾಕುತ್ತಾರೆ. ರಾತ್ರಿ ವೇಳೆ ಅದರಲ್ಲಿ ಎರಡು ಲೈಟ್ ಅನ್ನು ಆನ್ ಮಾಡಿ ಇಡ್ತಾರೆ. ಅದು ಸುತ್ತ ತಿರುಗ್ತಾ ಇರುತ್ತೆ.
ಇದ್ರಿಂದಾಗಿ ಪ್ರಾಣಿಗಳು ಲೈಟ್ ಕಂಡು ಯಾರೋ ಬಂದ್ರಪ್ಪ ಎಂದುಕೊಂಡು ಗದ್ದೆಗೆ ಇಳಿಯುವ ಸಾಹಸ ಮಾಡಲ್ಲ. ಜತೆಗೆ ಸ್ಪೀಕರ್ನಲ್ಲಿ ಹುಲಿ, ಆನೆ, ಚಿರತೆ ಸೇರಿ ವಿವಿಧ ಪ್ರಾಣಿಗಳ ಕೂಗನ್ನು ಹಾಕ್ತಾರೆ.
ಇದ್ರಿಂದಾಗಿ ಪ್ರಾಣಿಗಳು ಇವರ ತೋಟದತ್ತ ಬರುವುದೇ ಇಲ್ವಂತೆ. ತಂದೆಯ ಈ ಹೊಸ ಉಪಾಯಕ್ಕೆ ಮಗ ಆಯುಷ್ ಸಾಥ್ ಕೊಡ್ತಾನೆ. ತಂದೆ ಜತೆ ಗದ್ದೆಗೆ ತೆರಳಿ ಲೈಟ್, ಸ್ಪೀಕರ್ ಫಿಕ್ಸ್ ಮಾಡೋಕೆ ಸಹಾಯ ಮಾಡ್ತಾನೆ.
ಪ್ರೌಢಶಾಲಾ ಉಪಾಧ್ಯಾಯರ ಈ ಹೊಸ ಉಪಾಯ ಈಗ ಹಳ್ಳಿ ಹಳ್ಳಿಗೂ ಫೇಮಸ್ ಆಗಿದೆ. ಇತರೆ ಕೃಷಿಕರು ಪ್ರಾಣಿಗಳ ಹಾವಳಿ ತಡೆಯೋಕೆ ಇದೇ ಮಾದರಿ ಅನುಸರಿಸಲು ಮುಂದಾಗಿದ್ದಾರೆ. ನೀವು ಕೃಷಿಕರಾಗಿದ್ರೆ ಕಾಡು ಪ್ರಾಣಿಗಳು ನಿಮಗೂ ಉಪಟಳ ಕೊಡ್ತಿದ್ರೆ, ಈ ಮಾಸ್ಟರ್ ಪ್ಲಾನ್ನೊಮ್ಮೆ ಟ್ರೈ ಮಾಡಿ.