ಕುಂದಾಪುರ(ಉಡುಪಿ): ಕೇರಳದ ಕೋಹಿಕ್ಕೋಡು ವಿಮಾನ ನಿಲ್ದಾಣದಿಂದ ಭಟ್ಕಳಕ್ಕೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ 5 ಮಂದಿಯನ್ನು ಕುಂದಾಪುರ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದು 6 ಮಂದಿಯನ್ನು ವಿಚಾರಣೆ ನಡೆಸಿದ್ದಾರೆ.
ಭಟ್ಕಳ ಮೂಲದವರಾದ ನವೀದ್ (23), ಮಹಮ್ಮದ್ ಕಲೀಲ್ ಕಾಝಿಯಾ (62), ಮಹಮ್ಮದ್ ಅಸೀಮ್ (23), ಫೈಝ್ ಅಹಮ್ಮದ್ ಮವಾನ್(29), ಮಹಮ್ಮದ್ ಅದ್ನಾನ್(25) ಬಂಧಿತರು. ಇವರಿಂದ ಒಂದು ಕೆಜಿ 152 ಗ್ರಾಂ ತೂಕದ ಚಿನ್ನದ ನಾಣ್ಯಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಂದು ಕಾರಿನಲ್ಲಿದ್ದ ಮುಜ್ತಾಬಾ ಕಾಸೀಮ್, ಉಮೈರ್ ಅಹಮ್ಮದ್, ವಾಸಿಫ್ ಅಹಮದ್, ಮುಝಾಮಿಲ್, ಜಮೀಲ್, ಮೀರಾ ಸಮೀರ್ ಎನ್ನುವರನ್ನು ವಿಚಾರಣೆ ಸಲುವಾಗಿ ಮಂಗಳೂರಿನ ಕಮಿಷನರ್ ಆಫ್ ಕಸ್ಟಮ್ಸ್ ಅವರಿಗೆ ಹಸ್ತಾಂತರ ಮಾಡಲಾಗಿದೆ. ಸ್ವಾಧೀನ ಪಡಿಸಿಕೊಂಡ ಚಿನ್ನದ ಮೌಲ್ಯ 46 ಲಕ್ಷ ರೂ., ವಾಹನಗಳ ಒಟ್ಟು ಮೌಲ್ಯ 10 ಲಕ್ಷ ರೂ. ಎನ್ನಲಾಗಿದೆ.

ದುಬೈನಿಂದ ಕೋಯಿಕ್ಕೋಡ್ ವಿಮಾನ ನಿಲ್ದಾಣಕ್ಕೆ ಬಂದ ಭಟ್ಕಳ ಮೂಲದ ವ್ಯಕ್ತಿಗಳು ಕೋಯಿಕ್ಕೋಡಿನಿಂದ ಮಂಗಳೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ಭಟ್ಕಳಕ್ಕೆ ಟವೇರಾ ಕಾರಿನಲ್ಲಿ ಚಿನ್ನದ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕುಂದಾಪುರ ಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.