ಕುಂದಾಪುರ: ತ್ರಿವಳಿ ತಲಾಖ್ ನೀಡಿದ ಪತಿಯ ವಿರುದ್ಧ ಮಹಿಳೆಯೊಬ್ಬರು ಕುಂದಾಪುರ ನಗರ ಠಾಣೆಯಲ್ಲಿ ದೂರು ನೀಡಿದ್ದು, ಇದು ಉಡುಪಿ ಜಿಲ್ಲೆಯಲ್ಲಿಯೇ ತ್ರಿವಳಿ ತಲಾಖ್ ವಿರುದ್ಧ ದಾಖಲಾದ ಮೊದಲ ಪ್ರಕರಣವಾಗಿದೆ.
ಹನೀಫ್ ಎಂಬುವರ ಜೊತೆ 2019ರ ಜುಲೈ 4ರಂದು ಮೂಡುಗೋಪಾಡಿಯಲ್ಲಿ ಮದುವೆಯಾದ ಸಂತ್ರಸ್ತೆಯ ಪತಿ ಮನೆಯವರು 5 ಲಕ್ಷ ರೂ. ವರದಕ್ಷಿಣೆ ಕೇಳಿದ್ದರಂತೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂತ್ರಸ್ತ ಮಹಿಳೆ, ನಾವು 2 ಲಕ್ಷ ರೂ. ನೀಡಿದ್ದೆವು. ಇದೇ ಕಾರಣ ನೀಡಿ ಪತಿ ಹಾಗೂ ಮನೆಯವರು ನಿತ್ಯ ಕಿರುಕುಳ ನೀಡುತ್ತಿದ್ದರು. ಆ. 15ರಂದು ಪತಿ ತನಗೆ ನಿಷೇಧಿತ ತ್ರಿವಳಿ ತಲಾಖ್ ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಹಿರಿಯಡಕ ನಿವಾಸಿಗಳಾದ ಹನೀಫ್ ಸಯ್ಯದ್ (32), ಆತನ ತಂದೆ ಅಬ್ಬಾಸ್ ಸಯ್ಯದ್, ತಾಯಿ ಜೈತುನ್ ಹಾಗೂ ಪತಿಯ ಅಕ್ಕ ಆಯೇಷಾ ವಿರುದ್ಧ ದೂರು ನೀಡಿದ್ದಾರೆ. ಈ ಬಗ್ಗೆ ಕುಂದಾಪುರ ನಗರ ಠಾಣೆಯಲ್ಲಿ ಸೆಕ್ಷನ್ 4ರ ಮುಸ್ಲಿಂ ಮಹಿಳೆಯರ ವಿವಾಹ ರಕ್ಷಣಾ ಕಾಯ್ದೆ ಹಕ್ಕಿನಡಿ ಕೇಸು ದಾಖಲಾಗಿದೆ. ಜತೆಗೆ ವರದಕ್ಷಿಣೆ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಕುಂದಾಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ .