ಉಡುಪಿ: ಮೇವಿಲ್ಲದೆ ಸಂಕಷ್ಟಕ್ಕೆ ಈಡಾಗುತ್ತಿದ್ದ ಗೋಶಾಲೆಗಳು ಇನ್ಮುಂದೆ ಈ ತೊಂದರೆಯನ್ನು ಅನುಭವಿಸುವುದಿಲ್ಲ. ಕಾರಣ, ರಾಜ್ಯದ ಪ್ರಮುಖ ದೇಗುಲಗಳ ವಾರ್ಷಿಕ ಆದಾಯದ ಶೇ 2ರಷ್ಟನ್ನು ಗೋ ಗ್ರಾಸಕ್ಕೆ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ನೀಲಾವರ ಗೋಶಾಲೆಯಲ್ಲಿ ಮುಜರಾಯಿ ಸಚಿವ ಶ್ರೀನಿವಾಸ ಪೂಜಾರಿ ಮಾತನಾಡಿ, ರಾಜ್ಯದಲ್ಲಿ ಮೇವಿನ ಸಮಸ್ಯೆಯಿಂದ ಸಾವಿರಾರು ಗೋಶಾಲೆಗಳು ಬಳಲುತ್ತಿವೆ. ಈ ಸಮಸ್ಯೆ ನೀಗಿಸುವಂತೆ ಪೇಜಾವರ ಶ್ರೀಗಳಿಂದ ಸಚಿವರಿಗೆ ಮನವಿ ಮಾಡಲಾಗಿತ್ತು. ಶ್ರೀಗಳ ಜೊತೆ ಚರ್ಚಿಸಿ ಸಚಿವರು ಮಹತ್ವದ ನಿರ್ಣಯ ಅಂತಿಮಗೊಳಿಸಿದ್ದಾರೆ ಎಂದರು.
ರಾಜ್ಯದ ಎ ಮತ್ತು ಬಿ ಗ್ರೇಡ್ ದೇವಾಲಯದ ಆದಾಯದಲ್ಲಿ ಶೇ 2ರಷ್ಟನ್ನು ಗೋ ಗ್ರಾಸಕ್ಕೆ ಮೀಸಲಿಡಲಾಗಿದೆ. ದೇವಾಲಯದ ಅಕ್ಕಪಕ್ಕದ ನೋಂದಾಯಿತ ಗೋಶಾಲೆಗಳಿಗೆ ಗೋಗ್ರಾಸ ನಿಧಿ ಮಂಜೂರು ಮಾಡಲಾಗಿದೆ. ಶೀಘ್ರವೇ ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಸುತ್ತೋಲೆ ಹೊರಡಿಸುತ್ತೇನೆ. ಗೋಶಾಲೆಗಳಿಗೆ ಗೋಮಾಳ ಮೀಸಲು ಜಾಗಗಳನ್ನು ಅನುಭೋಗಕ್ಕೆ ನೀಡುವ ಬಗ್ಗೆ ಚರ್ಚಿಸಲಾಗುವುದು ಎಂದು ಮಾಹಿತಿ ನೀಡಿದರು.