ಉಡುಪಿ: ಸದನದಲ್ಲಿ ಮೀನುಗಾರರ ಸಮಸ್ಯೆ ಬಗ್ಗೆ ಧ್ವನಿ ಎತ್ತುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಉಡುಪಿಯ ಮಲ್ಪೆ ಬಂದರಿನಲ್ಲಿ ಮಾತನಾಡಿದ ಅವರು, ಮೀನುಗಾರರ ಸಮಸ್ಯೆ ಹೇಳಲು ಮುಖ್ಯಮಂತ್ರಿಗಳ ಭೇಟಿಯಾದರೆ ಲೆಕ್ಕಕ್ಕೆ ಬರುವುದಿಲ್ಲ. ವಿಧಾನಸಭೆಯಲ್ಲಿ ಮೀನುಗಾರರ ಸಮಸ್ಯೆ ಬಗ್ಗೆ ಚರ್ಚಿಸುತ್ತೇನೆ. ಮೀನುಗಾರರ ಧ್ವನಿಯಾಗಿ ಸದನದಲ್ಲಿ ಬೆಲೆ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.
ಈ ಸರ್ಕಾರ ಮೀನುಗಾರರ ಸಮಸ್ಯೆ ನಿವಾರಿಸುತ್ತದೆ ಎಂಬ ನಂಬಿಕೆ ಇಲ್ಲ. ಮುಂದಿನ ಅವಧಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಮೀನುಗಾರಿಕೆ ವಿಚಾರದಲ್ಲಿ ರಾಷ್ಟ್ರದಲ್ಲಿ ಏಕರೂಪಿ ಕಾನೂನು ಬರಬೇಕು. ಎಲ್ಲ ರಾಜ್ಯಗಳ ಜೊತೆ ಸಮಾಲೋಚನೆ ನಡೆಸಬೇಕಾಗುತ್ತದೆ. ಮೀನುಗಾರರ ಪೆನ್ಶನ್, ಡೀಸೆಲ್ ಸಬ್ಸಿಡಿ, ಆಶ್ರಯ ಮನೆ, ಸಿಆರ್ಝಡ್ ಸಮಸ್ಯೆ ಬಗೆ ಹರಿಸುತ್ತೇವೆ ಎಂದು ತಿಳಿಸಿದರು.
ಹೊಸ ರಾಜ್ಯಪಾಲರಿಗೆ ಅಭಿನಂದನೆ:
ಹೊಸ ರಾಜ್ಯಪಾಲರಿಗೆ ಅಭಿನಂದನೆ ಸಲ್ಲಿಸುತ್ತೇನೆ, ನಿರ್ಗಮಿತ ರಾಜ್ಯಪಾಲರು ತಮ್ಮ ಕೈಲಾದ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಮಗೆ ಸಾಕಷ್ಟು ಭಿನ್ನಾಭಿಪ್ರಾಯ ಇರಬಹುದು. ಭೇಟಿ ಮಾಡಲು ಬಯಸಿದಾಗಲೆಲ್ಲ ನಮ್ಮನ್ನು ಅವರು ಕರೆದಿದ್ದಾರೆ. ಕಾಂಗ್ರೆಸ್ ಪಕ್ಷದ ಜೊತೆ ಚರ್ಚೆ ಮಾಡಿದ್ದಾರೆ. ಉಳಿದಂತೆ ಪೊಲಿಟಿಕಲ್ ಬಾಸ್ಗಳು ಹೇಳಿದಂತೆ ಮಾಡಿದ್ದಾರೆ ಎಂದರು.
ಕುಮಾರ ಸ್ವಾಮಿ-ಸುಮಲತಾ ನಡುವಿನ ಸಂಘರ್ಷ:
ಉಡುಪಿಯಲ್ಲಿ ಮಾತನಾಡುತ್ತಾ ಕುಮಾರ ಸ್ವಾಮಿ-ಸುಮಲತಾ ನಡುವಿನ ಸಂಘರ್ಷ ಕುರಿತು ಪ್ರತಿಕ್ರಿಯೆ ನೀಡಿ, ನನಗೆ ಕುಮಾರಸ್ವಾಮಿ ಸುದ್ದಿನೂ ಬೇಡ, ಸುಮಲತಾ ಸುದ್ದಿನೂ ಬೇಡ. ನಮ್ಮ ಗಮನ ಇರುವುದು ಮೇಕೆದಾಟು ವಿಚಾರದಲ್ಲಿ. ಇದರಲ್ಲಿ ಮುಖ್ಯಮಂತ್ರಿಗಳು ತಮಿಳುನಾಡು ಸಿಎಂ ಸ್ಟಾಲಿನ್ಗೆ ಪತ್ರ ಬರೆದಿರುವುದು ಸರಿಯಲ್ಲ. ಮೊದಲು ಟೆಂಡರ್ ಕರೆದು ಮೇಕೆದಾಟು ಡ್ಯಾಮ್ ಕಟ್ಟುವ ಕೆಲಸ ಮಾಡಿ. ಡ್ಯಾಮ್ ವಿಚಾರದಲ್ಲಿ ಏರುಪೇರು ಇದ್ದರೆ, ಅದಕ್ಕೊಂದು ತಂಡ ಇದೆ. ತಂಡದ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಎಂದು ಡಿಕೆಶಿ ಆಗ್ರಹಿಸಿದರು.
ಚಿದಾನಂದ ಸವದಿ ಕಾರು ಅಪಘಾತ:
ಡಿಸಿಎಂ ಸವದಿ ಪುತ್ರ ಚಿದಾನಂದ ಸವದಿ ಕಾರು ಅಪಘಾತ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಈ ಹಿಂದೆ ಶಾಸಕ ಸಿ ಟಿ ರವಿ ವಿಚಾರದಲ್ಲೂ ಹೀಗೆ ಆಗಿತ್ತು. ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.
ಮಲ್ಪೆ ಮೀನುಗಾರಿಕಾ ಬಂದರಿಗೆ ಭೇಟಿ:
ಮಲ್ಪೆ ಮೀನುಗಾರಿಕಾ ಬಂದರು ಭೇಟಿ ನೀಡಿದರು. ಮೀನುಗಾರರ ಸಂಕಷ್ಟ ಆಲಿಸಲು ಬಂದಿದ್ದ ಅವರು, ಎರಡು ಗಂಟೆಗೂ ಅಧಿಕ ಕಾಲ ಮೀನುಗಾರರ ಸಮಸ್ಯೆಗಳನ್ನು ಆಲಿಸಿದರು. ಸರ್ವಋತು ಮೀನುಗಾರಿಕಾ ಬಂದರಿನಲ್ಲಿ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಮೀನುಗಾರ ಮುಖಂಡರು ಭಾಗವಹಿಸಿದ್ದರು. ಡೀಸೆಲ್ ಸಬ್ಸಿಡಿ, ಮತ್ಸ್ಯಾಶ್ರಯ ಮನೆ, ಸಿಆರ್ಝಡ್ ಸಮಸ್ಯೆ ಸೇರಿದಂತೆ, ಹಲವಾರು ವಿಷಯಗಳ ಬಗ್ಗೆ ಮುಖಂಡರು ಗಮನ ಸೆಳೆದರು. ಮೀನುಗಾರರ ಅಹವಾಲು ಸ್ವೀಕರಿಸಿದ ಬಳಿಕ ಕೆಲಕಾಲ ಬೋಟ್ನಲ್ಲಿ ಕುಳಿತು ಬಂದರು ವೀಕ್ಷಣೆ ಮಾಡಿದರು.
ಸಿಎಂ ಅಭ್ಯರ್ಥಿ ಕುರಿತು ಪ್ರತಿಕ್ರಿಯೆ:
ನನ್ನನ್ನು ಮುಂದಿನ ಸಿಎಂ ಅಭ್ಯರ್ಥಿ ಮಾಡಿ ಎಂದು ನಾನು ಯಾರಲ್ಲೂ ಎಂದೂ ಕೇಳಿಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸಿಎಂ ಅಭ್ಯರ್ಥಿ ವಿಚಾರ ಚರ್ಚೆ ಮಾಡುವ ವಿಷಯವೇ ಅಲ್ಲ. ಸಿದ್ದರಾಮಯ್ಯ ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುದು ಪಕ್ಷದ ಒಳಗೆ ತೀರ್ಮಾನಿಸುವ ವಿಚಾರ ಎಂದು ತಿಳಿಸಿದರು.
ಕೇಂದ್ರ ಸಚಿವ ಸಂಪುಟ ವಿಸ್ತರಣೆ:
ಕೇಂದ್ರ ಸಚಿವ ಸಂಪುಟ ವಿಸ್ತರಣೆ ಆಗುತ್ತಿದ್ದು, ರಾಜ್ಯಕ್ಕೆ ಧ್ವನಿಯಾಗುವವರು ಸಚಿವರಾಗಲಿ. ನಮ್ಮ 25 ಸಂಸದರು ಮಾತನಾಡುತ್ತಿಲ್ಲ ಎಂದರು. ಮುಖ್ಯಮಂತ್ರಿ ಯಡಿಯೂರಪ್ಪ ಪರ ಮಾತನಾಡಿದ ಡಿ ಕೆ ಶಿವಕುಮಾರ್, ಶಾಸಕ ಯತ್ನಾಳ್ ಮತ್ತು ಸಚಿವ ಯೋಗೇಶ್ವರ್ ಖಾಲಿ ಪಾತ್ರೆಗಳು ಎಂದರು.
ವ್ಯಾಕ್ಸಿನ್ ವಿಚಾರದಲ್ಲಿ ತಾರತಮ್ಯ:
ವ್ಯಾಕ್ಸಿನ್ ವಿಚಾರದಲ್ಲಿ ಗುಜರಾತ್ಗೆ ಬೆಣ್ಣೆ, ಕರ್ನಾಟಕಕ್ಕೆ ಸುಣ್ಣ ನೀಡಲಾಗಿದೆ. ಕೇಂದ್ರ ಕೊಡುವ ವ್ಯಾಕ್ಸಿನ್ ಏನೇನೂ ಸಾಲದು ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.
ಉದಯ್ ಗಾಣಿಗ ಕೊಲೆ ಸಿಬಿಐಗೆ ವಹಿಸಿ:
ಬಿಜೆಪಿ ಕಾರ್ಯಕರ್ತ ಯಡಮೊಗೆ ಉದಯ್ ಗಾಣಿಗ ಒಂದೇ ಕೊಲೆಯಲ್ಲ, ಹಲವು ಕೊಲೆಗಳು ರಾಜ್ಯದಲ್ಲಿ ಆಗಿವೆ. ಎಲ್ಲ ಕೊಲೆಗಳನ್ನು ಮುಚ್ಚಿ ಹಾಕುವ ದೊಡ್ಡ ಪ್ರಯತ್ನ ನಡೆಯುತ್ತಿದೆ. ಬೇರೆ ಕೊಲೆಗಳು ನಡೆದಾಗ ಸಿಬಿಐಗೆ ವಹಿಸಿದ್ದಾರೆ. ಇದನ್ನು ಕೂಡ ಸಿಬಿಐಗೆ ವಹಿಸಿ, ಸಾವಿಗೆ ನ್ಯಾಯ ದೊರಕಿಸಿ ಕೊಡಿ ಅಂತಾ ಡಿಕೆಶಿ ಆಗ್ರಹಿಸಿದರು. ಇತ್ತೀಚಿಗೆ ಕೊಲೆಯಾದ ಉದಯ್ ಗಾಣಿಗ ಮನೆಗೆ ಡಿಕೆಶಿ ಭೇಟಿ ನೀಡಿ ಮಾತನಾಡಿದ ಅವರು, ಮನೆಯವರಿಗೆ ಸಾಂತ್ವನ ಹೇಳಿ ಒಂದು ಲಕ್ಷದ 25 ಸಾವಿರ ಮೊತ್ತದ ಚೆಕ್ ವಿತರಿಸಿದರು.
ಉದಯ್ ಬಿಜೆಪಿ ಪಕ್ಷಕ್ಕೆ, ಬೆಳಗ್ಗೆ ಸಂಜೆ ದುಡಿದಿದ್ದಾನೆ ಅಂತ ಹೆಣ್ಣು ಮಗಳು ಹೇಳುತ್ತಾಳೆ. ಕೊಲೆ ಮಾಡಿದ್ದು, ಬಿಜೆಪಿಯ ಪಂಚಾಯತ್ ಅಧ್ಯಕ್ಷನೇ ಅಂತ ಹೇಳಿದ್ದಾಳೆ. ನ್ಯಾಯ ಒದಗಿಸಿ, ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಬೇಕು. ಈ ಬಗ್ಗೆ ವಿಧಾನಸಭೆಯಲ್ಲಿ ಹೋರಾಟ ಮಾಡುತ್ತೇವೆ. ಸಿಎಂ, ಗೃಹ ಸಚಿವರಲ್ಲಿ ಪ್ರಕರಣವನ್ನು ಸಿಬಿಐಗೆ ನೀಡಬೇಕು ಅಂತ ಒತ್ತಾಯಿಸುತ್ತೇನೆ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಅನಧಿಕೃತ ಕಟ್ಟಡಗಳ ತೆರವು: ಆದೇಶ ಪಾಲಿಸದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಗರಂ