ಉಡುಪಿ: ಕೊರೊನಾ ವೈರಸ್ ದೇಹಕ್ಕೆ ಬಾಧಿಸದಂತೆ ಆಯುರ್ವೇದದಲ್ಲಿ ಚಿಕಿತ್ಸೆಯಿದೆ ಎಂದು ಆಯುಷ್ ಇಲಾಖೆ ಹೇಳಿದ್ದು, ಕಾರ್ಕಳ ತಾಲೂಕಿನಲ್ಲಿ ಇದನ್ನು ಪ್ರಯೋಗ ಮಾಡಲಾಗುತ್ತಿದೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ನೇತೃತ್ವದಲ್ಲಿ ತಾಲೂಕಿನಾದ್ಯಂತ ಕಷಾಯ ವಿತರಣೆ ಆರಂಭಿಸಲಾಗಿದೆ. ಸುಮಾರು ಒಂದು ಸಾವಿರಕ್ಕಿಂತಲೂ ಹೆಚ್ಚು ಜನ ಹೊರ ರಾಜ್ಯದಿಂದ ಬಂದವರು ಕಾರ್ಕಳ ಮತ್ತು ಹೆಬ್ರಿ ತಾಲೂಕಿನಲ್ಲಿ ಕ್ವಾರಂಟೈನ್ ಆಗಿದ್ದಾರೆ.
ಶುಂಠಿ, ಅರಿಶಿನ ,ಬೆಲ್ಲ, ಏಲಕ್ಕಿ, ನಿಂಬೆ ಹಣ್ಣು ಮುಂತಾದ ದ್ರವ್ಯಗಳನ್ನು ಮಿಶ್ರಣ ಮಾಡಿ ಕಷಾಯ ತಯಾರಿಸಲಾಗುತ್ತದೆ. ಇದಕ್ಕೆ ಕರಾವಳಿಯ ಖಡಕ್ ಕಾಳುಮೆಣಸನ್ನು ಸೇರಿಸಲಾಗುತ್ತಿದೆ. ಈ ಎಲ್ಲ ದ್ರವ್ಯಗಳಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಮಾಡುವ ಸಾಮರ್ಥ್ಯವಿದೆ ಎಂಬುದು ಆಯುಷ್ ಇಲಾಖೆಯ ಅಭಿಪ್ರಾಯ. ಹೀಗಾಗಿ ಇದನ್ನು ಕಾರ್ಕಳದಲ್ಲಿ ಪ್ರಯೋಗಕ್ಕೆ ತರಲಾಗಿದೆ. ಮಹಾರಾಷ್ಟ್ರ, ತೆಲಂಗಾಣ, ಕೇರಳ, ತಮಿಳುನಾಡು ಸೇರಿದಂತೆ ದೇಶದ ಸುಮಾರು ಏಳೆಂಟು ರಾಜ್ಯಗಳಿಂದ ಉಡುಪಿಗೆ ವಾಪಸ್ ಆಗಿರುವವರಿಗೆ ಈ ಕಷಾಯವನ್ನು ಕೊಡಲಾಗುತ್ತಿದೆ.